‘ಎಲ್ಲಾ ಸಮುದಾಯದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರದೊಂದಿಗೆ ವಿದ್ಯಾಭ್ಯಾಸಕ್ಕೆ ಸಹಕಾರಿಯಾಗುವಂತೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ’. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಸಂಘ-ಸಂಸ್ಥೆಗಳೊಂದಿಗೆ ಒಟ್ಟಾಗಿ ಶ್ರಮಿಸೋಣ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಟೌನ್ ನಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಶ್ರೀ ಅರುಂಧತಿ ಸೇವಾ ಸಂಸ್ಥೆಯ 13ನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ದೇಶದ ಭವಿಷ್ಯ, ಅವರ ಬೆಳವಣಿಗೆ ರೂಪಿಸಲು ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸಂಸ್ಕಾರದ ಜತೆಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರವು ಇನ್ಫೋಸಿಸ್ ಸಂಸ್ಥೆಯ ಸಹಯೋಗದೊಂದಿಗೆ ಕಾನ್ವೆಂಟ್ ಮಾದರಿ ಶಿಕ್ಷಣ ಒದಗಿಸುವ ಮಹತ್ತರ ಕಾರ್ಯ ಕೈಗೆತ್ತಿಕೊಂಡಿದೆ. ಒಂದು ತಿಂಗಳಲ್ಲಿ ಕಾನ್ವೆಂಟ್ ಮಾದರಿ ಶಿಕ್ಷಣ ನೀಡುವ ಅಗತ್ಯ ಕೆಲಸಗಳು ಆರಂಭಿಸಲಾಗುವುದು ಎಂದರು.
ಜಿಲ್ಲೆಗೆ ವೈದ್ಯಕೀಯ ಶಿಕ್ಷಣಕ್ಕಾಗಿ ಮೆಡಿಕಲ್ ಕಾಲೇಜು ತರಲು ಸರ್ಕಾರ ಮಟ್ಟದ ಪ್ರಯತ್ನದಲ್ಲಿದ್ದೇನೆ. ದೇವನಹಳ್ಳಿ ಟೌನ್ ನಲ್ಲಿ ಡಾ. ಅಂಬೇಡ್ಕರ್ ಭವನ, ಡಾ. ಬಾಬು ಜಗಜೀವನ ಭವನ ಹಾಗೂ ವಾಲ್ಮೀಕಿ ಭವನ ನಿರ್ಮಾಣ ಅರ್ಧಕ್ಕೆ ನಿಂತಿದ್ದು, ಬಾಕಿ ಕಾಮಗಾರಿ 3 ತಿಂಗಳಲ್ಲಿ ಆರಂಭಿಸುವುದು ಎಂದು ಸಚಿವರು ಭರವಸೆ ನೀಡಿದರು.
ಇದೇ ವೇಳೆ ಅರುಂಧತಿ ಸೇವಾ ಸಂಸ್ಥೆಯವರು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೆನಪಿನ ಸ್ಮರಣೀಕೆಯನ್ನು ನೀಡಿ, ಗೌರವಿಸಿದರು.
ಮುಖ್ಯ ಅತಿಥಿಗಳಾದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ವಿ. ಶಾಂತಕುಮಾರ್ ಅವರು ಮಾತನಾಡಿ ಕಳೆದ 13 ವರ್ಷಗಳಿಂದ ತಾಲ್ಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಯಾವುದೇ ಜಾತಿ ಭೇದ ಇಲ್ಲದೆ ಸಮಾನವಾಗಿ ಗುರುತಿಸಿ, ಪುರಸ್ಕಾರ ನೀಡುವದು ಅತ್ಯುತ್ತಮ ಸಮಾಜ ಸೇವಾ ಕಾರ್ಯ. ನಾನು ಬಡ ಮಕ್ಕಳ ಓದಿಗಾಗಿ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ ದೇವನಹಳ್ಳಿ ತಾಲೂಕು ಹಿರಿಯ ಉಪ ನೋಂದಣಾಧಿಕಾರಿ ಪ್ರಸಾದ್ ಕುಮಾರ್ ಅವರು ಮಾತನಾಡಿ ಸಂಸ್ಥೆಯು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡು ಪ್ರತಿಭಾನ್ವಿತ ಸಾಧಕರಿಗೆ ಪ್ರೋತ್ಸಾಹಿಸುವ ಕಾರ್ಯ ಹಾಗೂ ಸೇವಾ ಮನೋಭಾವ ಅನುಕರಣೀಯ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿದ್ಯಾರ್ಥಿಗಳಿಗೆ ಉಚಿತ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿಯ ಅನುಕೂಲ ಕಲ್ಪಿಸುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರುಂಧತಿ ಸೇವಾ ಸಂಸ್ಥೆಯ ಅಧ್ಯಕ್ಷರಾದ ಜಾಲಿಗೆ ಮುನಿರಾಜು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪ್ರತಿ ವರ್ಷವೂ 150 ಪ್ರತಿಭಾವಂತರ ವಿದ್ಯಾರ್ಥಿಗಳಿಗೆ ಸನ್ಮಾನಿಸುತ್ತಿತ್ತು. ಈ ಬಾರಿ 450 ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸುತ್ತಿರುವುದು ನಮ್ಮ ಸಂಸ್ಥೆಯ ಸೌಭಾಗ್ಯ ಎನ್ನುತ್ತಾ, 13 ವರ್ಷಗಳಿಂದ ಸಂಸ್ಥೆ ಮಾಡುತ್ತಿರುವ ಸಮಾಜ ಸೇವಾ ಕಾರ್ಯವನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ 2024-25ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 450 ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ. ಜಗನ್ನಾಥ, ಹೊಸಕೋಟೆ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಹೆಚ್.ಎಂ ಸುಬ್ಬರಾಜು, ದೇವನಹಳ್ಳಿ ವಿಧಾನಸಭಾ ಜೆಡಿಎಸ್ ಉಪಾಧ್ಯಕ್ಷ ವಿ. ಹನುಮಂತಪ್ಪ, ದೇವನಹಳ್ಳಿ ಟೌನ್ ಪುರಸಭೆ ಅಧ್ಯಕ್ಷ ಡಿ.ಎಂ. ಮುನಿಕೃಷ್ಣ, ದೇವನಹಳ್ಳಿ ಟೌನ್ ಪುರಸಭೆ ಉಪಾಧ್ಯಕ್ಷ ಜಿ.ಎ ರವೀಂದ್ರ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಆರ್. ರವಿಕುಮಾರ್, ದೇವನಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಸಿ ಮಂಜುನಾಥ್, ವಿಜಯಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ವೆಂಕಟೇಶ್ ಸೇರಿ ಶ್ರೀ ಅರುಂಧತಿ ಸೇವಾ ಸಂಸ್ಥೆಯ ಕಾರ್ಯಕಾರಿ ಮಂಡಳಿ ಸದಸ್ಯರು ಹಾಗೂ ಸಾಧಕ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.