ಭಾರತ ಸೇವಾದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಹಾಗೂ ರಾಜ್ಯ ಸಮಿತಿ ನನ್ನನ್ನು ತಾಲೂಕು ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅವರಿಗೆ ನಾನು ಅಭಿನಂದನೆ ಸಲ್ಲಿಸುವೆ ಎಂದು ಭಾರತ ಸೇವಾದಳದ ತಾಲೂಕು ಘಟಕದ ನೂತನ ಅಧ್ಯಕ್ಷ ಆರ್.ವಿ.ಮಹೇಶ್ ಕುಮಾರ್ ಅವರು ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಭಾರತ ಸೇವಾದಳ ತಾಲೂಕು ಸಮಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಹಯೋಗದಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು, ಭಾರತ ಸೇವಾದಳ ಶಾಲಾ ಮಕ್ಕಳಿಗೆ ಶಿಕ್ಷಣದ ಜೊತೆಗೆ ರಾಷ್ಟ್ರಗೀತೆ, ರಾಷ್ಟ್ರಧ್ವಜ, ರಾಷ್ಟ್ರಪಕ್ಷಿ ರಾಷ್ಟ್ರಲಾಂಚನ, ರಾಷ್ಟ್ರಭಕ್ತಿಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದೆ, ರಾಷ್ಟ್ರವನ್ನು ಪ್ರತಿಬಿಂಬಿಸುವುದೇ ಧ್ವಜ, ಕೇಸರಿ ತ್ಯಾಗ, ಹಸಿರು ಸಂವೃದ್ಧಿ, ಬಿಳಿ ಶಾಂತಿಯ ಪ್ರತೀಕವಾಗಿದೆ. ಈ ಮೂರು ಗುಣಗಳನ್ನು ನಾವೆಲ್ಲರು ಮೈಗೂಡಿಸಿಕೊಳ್ಳಬೇಕು ಎಂದರು.
ದೇಶದಲ್ಲಿ ಇಂದು ಮಾದಕ ವಸ್ತುಗಳ ಜಾಲ ಬೃಹತ್ತಾಗಿ ಬೆಳೆದಿದೆ, ಯುವ ಪೀಳಿಗೆ ಮಾದಕ ವ್ಯಸನಿಗಳಾಗುತ್ತಿದ್ದಾರೆ, ಪೋಷಕರು ಮದ್ಯಪಾನದಿಂದ ದೂರವಾಗಿ ಮಕ್ಕಳಿಗೆ ಮಾರ್ಗದರ್ಶಕರಂತೆ ಇರಬೇಕಿದೆ, ಮಕ್ಕಳು ಮಾದಕ ವ್ಯಸನ ಮತ್ತು ದುಶ್ಚಟಗಳಿಂದ ದೂರ ಇದ್ದು ಬಲಿಷ್ಠ ರಾಷ್ಟ್ರವನ್ನು ಕಟ್ಟುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಭಾರತ ಸೇವಾದಳ ತಾಲೂಕು ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ಆರ್.ವಿ.ಮಹೇಶ್ ಕುಮಾರ್ ಮತ್ತು ಪ್ರಧಾನ ಕಾರ್ಯದರ್ಶಿ ಹಮಾಮ್ ವೆಂಕಟೇಶ್ ಅವರನ್ನು ಸನ್ಮಾನಿಸಲಾಗಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹಮಾಮ್ ವೆಂಕಟೇಶ್, ರಾಜ್ಯ ಸಮಿತಿಯ ರವಿಕುಮಾರ್, ನೆಲಮಂಗಲದ ಹೊನ್ನಸಿದ್ದಯ್ಯ, ಹೊಸಕೋಟೆ ತಾಲೂಕು ಅಧ್ಯಕ್ಷರಾದ ಹರೀಶ್, ಕಾಂಗ್ರೆಸ್ ಸೇವಾದಳದ ಅಧ್ಯಕ್ಷರಾದ ಕಾಂತರಾಜು ಎಂ, ದೇವನಹಳ್ಳಿ, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ಹೊಸಕೋಟೆ ತಾಲೂಕು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.