ಮಕ್ಕಳು ಬಾಲ ನಟ, ನಟಿಯಾಗಿ ನಟಿಸಲು ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ

ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಗೆ ಸಂಬಂಧಿಸಿದ ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಕರ್ನಾಟಕ ನಿಯಮಗಳು 2ಸಿ ರಲ್ಲಿ ಒಬ್ಬ ಕಲಾವಿದನಾಗಿ ಕೆಲಸ ಮಾಡಬೇಕಾದ ಮಗು (1) ಕಲಂ 3ರ ನಿಬಂಧನೆಗಳ ವಿಷಯದಲ್ಲಿ ಮೇಲ್ಕಂಡ ಪರಿಸ್ಥಿತಿಗಳಿಗೆ/ನಿಯಮಗಳಿಗೆ ಒಳಪಟ್ಟಂತೆ ಮಗುವನ್ನು ಕಲಾವಿದನಾಗಿ ನಟನಾ ಕೆಲಸ ಮಾಡಲು ಇಚ್ಛಿಸಿದ್ದಲ್ಲಿ ಇನ್ನೂ ಮುಂದೆ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿಯನ್ನು ಪಡೆಯಬೇಕಾಗಿರುತ್ತದೆ.

ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ತಿದ್ದುಪಡಿ ಕಾಯ್ದೆ 2016 ರನ್ವಯ ಮಕ್ಕಳ ಶಿಕ್ಷಣದ ಹಕ್ಕಿಗೆ ಮಾರಕವಾಗದಂತೆ ಬಾಲ ನಟಿ/ನಟಿಯಾಗಿ ನಟನಾ ಕೆಲಸ ನಿರ್ವಹಿಸುವ ಚಟುವಟಿಕೆಗಳನ್ನು ಹೊರತುಪಡಿಸಿ, ಕಾಯ್ದೆಯ ಎಲ್ಲಾ ಉದ್ಯೋಗ ಮತ್ತು ಪ್ರಕ್ರಿಯೆಯಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಕಾಯ್ದೆಯು 14-18ರ ವಯಸ್ಸಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಂಡಲ್ಲಿ ತಪ್ಪಿತಸ್ಥ ಮಾಲೀಕರಿಗೆ 06 ತಿಂಗಳಿಂದ 02 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ರೂ.20,000/- ರಿಂದ ರೂ.50,000/-ರವರೆಗೆ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿರುತ್ತದೆ. ಪುನರಾವರ್ತಿತ ಅಪರಾಧಕ್ಕೆ 01 ವರ್ಷದಿಂದ 03 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿರುತ್ತದೆ. ಬಾಲ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಕರ್ನಾಟಕ ನಿಯಮಗಳು ‘2ಸಿ’ ರಲ್ಲಿ ಒಬ್ಬ ಕಲಾವಿದನಾಗಿ ಕೆಲಸ ಮಾಡಬೇಕಾದ ಮಗು (01) ಕಲಂ 3ರ ನಿಬಂಧನೆಗಳನ್ವಯ ಈ ಕೆಳಗಿನ ಪರಿಸ್ಥಿತಿಗಳಿಗೆ/ನಿಯಮಗಳಿಗೆ ಒಳಪಟ್ಟಂತೆ ಮಗು ಕಲಾವಿದನಾಗಿ ಕೆಲಸ ಮಾಡಲು ಅನುಮತಿಸಬಹುದಾಗಿದೆ.

ಯಾವುದೇ ಮಗುವನ್ನು ಒಂದು ದಿನದಲ್ಲಿ 05 ಗಂಟೆಗಳಿಗಿಂತ ಹೆಚ್ಚಿನ ಅವಧಿಗೆ ನಟನಾ ಕೆಲಸಕ್ಕೆ ನಿಯೋಜಿಸುವಂತಿಲ್ಲ ಮತ್ತು ವಿಶ್ರಾಂತಿ ಇಲ್ಲದೆ 03 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸುವಂತಿಲ್ಲ. ಶ್ರವಣ ಮತ್ತು ದೃಶ್ಯ ಮಾದ್ಯಮದ ಯಾವುದೇ ನಿರ್ಮಾಪಕರು ನಿರ್ಮಿಸಿದ ಅಥವಾ ಯಾವುದೇ ವಾಣಿಜ್ಯ ಪರ ಕಾರ್ಯಕ್ರಮದಲ್ಲಿ ಮಗು ಭಾಗವಹಿಸುವುದಿದ್ದರೆ ಆ ಚಟುವಟಿಕೆ ನಡೆಯುವ ಪ್ರದೇಶದ ಜಿಲ್ಲಾ ದಂಡಾಧಿಕಾರಿಗಳ ಪೂರ್ವಾನುಮತಿ ಪಡೆದು ಭಾಗವಹಿಸುವಂತೆ ಮಾಡುವುದು ಮತ್ತು ಚಟುವಟಿಕೆ ಪ್ರಾರಂಭಿಸುವ ಪೂರ್ವದಲ್ಲಿ ನಮೂನೆ “ಸಿ” ಯಲ್ಲಿ ಜಿಲ್ಲಾ ದಂಡಾಧಿಕಾರಿಗಳಿಗೆ ಮುಚ್ಚಳಿಕೆ ಪತ್ರ ಸಲ್ಲಿಸುವುದು. ಭಾಗವಹಿಸುವ ಮಕ್ಕಳ ಪಟ್ಟಿ, ಪೋಷಕರ ಅಥವಾ ಪಾಲಕರ ಒಪ್ಪಿಗೆ ಪತ್ರಸಲ್ಲಿಸುವುದು.

ಮಗುವಿನ ಸಂರಕ್ಷಣೆಗೆ ಸಂಬಂಧಿಸಿದಂತೆ, ನಿರ್ಮಾಪಕರ ಅಥವಾ ಸಮಾರಂಭದ ಆಯೋಜಕರ ಹೆಸರಗಳನ್ನು ಒದಗಿಸುವುದು. ಮಕ್ಕಳನ್ನು ಬಳಸಿ ಸಂಪೂರ್ಣ ಚಿತ್ರೀಕರಣ ಮಾಡುವ ಸಂದರ್ಭದಲ್ಲಿ ಮಕ್ಕಳ ದುರುಪಯೋಗ ಪ್ರಕರಣ, ನಿರ್ಲಕ್ಷ್ಯ ಅಥವಾ ಶೋಷಣೆ ನಡೆಯದಂತೆ ಸೂಕ್ತ ಮುಂಜಾಗ್ರತ ಕ್ರಮಗಳನ್ನು ಕೈಗೊಂಡಿರಬೇಕು.

ಕಲಂ ‘ಬಿ’ ಯಲ್ಲಿ ಉಲ್ಲೇಖಿಸಿರುವ ಮುಚ್ಚಳಿಕೆಯು 06 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ನಿಬಂಧನಗೆಳನ್ನು ಸುರಕ್ಷತೆ ಮತ್ತು ಮಕ್ಕಳ ದುರುಪಯೋಗ ತಡೆ ಕುರಿತಾದ ಮಾನ್ಯತೆ ಪಡೆದ ಮಾರ್ಗಸೂಚಿಗಳು ಮತ್ತು ಇಂತಹ ಉದ್ದೇಶಗಳಿಗಾಗಿ ಸೂಕ್ತ ಸರ್ಕಾರವು ನಿಗಧಿತವಾಗಿ ಹೊರಡಿಸಿರುವ ಈ ಕೆಳಕಂಡ ಸುರಕ್ಷತಾ ನೀತಿಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ಸ್ಪಷ್ಟವಾಗಿ ತಿಳಿಸುವುದು.

ಮಗುವಿನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಖಾತ್ರಿಪಡಿಸುವುದು.

ಮಗುವಿನ ಸಕಾಲಿಕ ಪೌಷ್ಠಿಕ ಆಹಾರ ಒದಗಿಸುವುದು. ದೈನಂದಿನ ಅಗತ್ಯಗಳಿಗೆ ಸಾಕಾಗುವಷ್ಟು ಸಾಮಾಗ್ರಿಗಳು, ಸ್ವಚ್ಚ ಮತ್ತು ಸುರಕ್ಷಿತವಾದ ಆಶ್ರಯ ಒದಗಿಸುವುದು. ಶಿಕ್ಷಣದ ಹಕ್ಕು ಸಂರಕ್ಷಣೆ, ಲೈಂಗಿಕ ಅಪರಾಧಗಳಿಂದ ರಕ್ಷಣೆ ಒಳಗೊಂಡಂತೆ ಮಕ್ಕಳ ರಕ್ಷಣೆ ಕುರಿತಾಗಿ ಕಾಲ ಕಾಲಕ್ಕೆ ಜಾರಿಯಲ್ಲಿರುವ ಎಲ್ಲಾ ಕಾನೂನುಗಳ ಪಾಲನೆ ಮಾಡುವುದು.

ಮಗು ಶಾಲೆಯ ಪಾಠ ಪ್ರವಚನಗಳಿಗೆ ಗೈರಾಗದಂತೆ ಶಿಕ್ಷಣದಲ್ಲಿ ನಿರಂತರವಾಗಿ ಮುಂದುವರೆಯಲು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು. ಯಾವುದೇ ಮಗು ನಿರಂತರವಾಗಿ 27 ದಿನಗಳಿಗಿಂತ ಹೆಚ್ಚಿನ ದಿನಗಳು ನಟನಾ ಕೆಲಸದಲ್ಲಿ ತೊಡಗಲು ಅವಕಾಶ ನೀಡಬಾರದು.

ಮಗುವಿನ ರಕ್ಷಣೆ, ಪೋಷಣೆ ಮತ್ತು ಹಿತಾಸಕ್ತಿಯನ್ನು ಕಾಪಾಡಲು ನಿರ್ಮಾಣ ಅಥವಾ ಕಾರ್ಯಕ್ರಮದಲ್ಲಿ ತೊಡಗಿರುವ ಪ್ರತಿ 05 ಮಕ್ಕಳಿಗೆ ಒಬ್ಬರಂತೆ ಜವಬ್ದಾರಿ ವ್ಯಕ್ತಿಯನ್ನು ನೇಮಿಸುವುದು. ನಿರ್ಮಾಣ ಅಥವಾ ಕಾರ್ಯಕ್ರಮದಿಂದ ಮಗುವಿಗೆ ಬರುವ ಒಟ್ಟು ಆದಾಯದ ಕನಿಷ್ಠ ಶೇ.20% ನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಮಗುವಿನ ಹೆಸರಿನಲ್ಲಿ ನಿಶ್ಚಿತ ಠೇವಣಿ ಖಾತೆ ತೆರೆದು ಇಡವುದು ಅದನ್ನು ಮಗು ಪ್ರಾಯಸ್ಥನಾದಾಗ ಪಡೆಯಲು ಅವಕಾಶ ಕಲ್ಪಿಸುವುದು.

ಯಾವುದೇ ಮಗುವಿನ ಒಪ್ಪಿಗೆ ಮತ್ತು ಇಚ್ಛೆಗೆ ವಿರುದ್ಧವಾಗಿ ಯಾವುದೇ ಧ್ವನಿ, ದೃಶ್ಯ ಮತ್ತು ಕ್ರೀಡಾ ಚಟುವಟಿಕೆ ಅನೌಪಾಚಾರಿಕ ಮನರಂಜನಾ ಚಟುವಟಿಕೆ ಒಳಗೊಂಡಂತೆ ಅವುಗಳನ್ನು ಭಾಗವಹಿಸುವಂತೆ ಮಾಡಬಾರದು. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಇಂಥದ್ದೊಂದು ನಿರ್ಧಾರ ಮಾಡಿದ್ದು, ಬಾಲ ನಟರು, ನಟಿಯರ ಪಾತ್ರಕ್ಕಾಗಿ ಮಕ್ಕಳನ್ನು ಬಳಸಿಕೊಳ್ಳಲು ಇಚ್ಚಿಸುವ ಸಿನಿಮಾ ನಿರ್ದೇಶಕರು, ನಿರ್ಮಾಪಕರು, ಆಯೋಜಕರು ಜಿಲ್ಲಾಧಿಕಾರಿಗಳಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯ.

ಮುಂದಿನ ದಿನಗಳಲ್ಲಿ ಮಕ್ಕಳನ್ನು ಚಿತ್ರಕತೆಗೆ ಜಿಲ್ಲಾಧಿಕಾರಿ ಅನುಮತಿ ಇಲ್ಲದೆ ಬಳಸಿಕೊಂಡಿದ್ದೇ ಆದಲ್ಲಿ ಕಾನೂನು ಉಲ್ಲಂಘನೆಯಾಗುತ್ತದೆ. ಕಾನೂನು ಉಲ್ಲಂಘಿಸುವ ಸಿನಿಮಾ ಹಾಗೂ ಧಾರಾವಾಹಿ ಜವಾಬ್ದಾರಿ ಹೊತ್ತ ಆಯೋಜಕರು, ನಿರ್ಮಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ  ಸಂಬಂಧಪಟ್ಟ ಕಾರ್ಮಿಕ ಅಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ramesh Babu

Journalist

Recent Posts

ಸ್ಥಳೀಯ ಸಂಸ್ಥೆಗಳಲ್ಲಿ ಚುರುಕಾಗಬೇಕಿದೆ ಬಿಎಂಸಿ: ಕೆರೆ, ಕುಂಟೆ, ಗೋಮಾಳ, ಅರಣ್ಯ ಸಂರಕ್ಷಣೆಗೆ ನಿರ್ಲಕ್ಷ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ನೈಸರ್ಗಿಕ ಸಂಪನ್ಮೂಲ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ರಚಿಸಲಾಗಿರುವ ಜೀವ ವೈವಿಧ್ಯ…

12 hours ago

ಅಪರೂಪದ ದುಬಾರಿ ಖಾಯಿಲೆಗಳು…….

ಇದಕ್ಕೊಂದು ಪರಿಹಾರ ರೂಪಿಸಬಹುದೇ...... ಅಪರೂಪದ ದುಬಾರಿ ಖಾಯಿಲೆಗಳು.......... ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ…

2 days ago

ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: 7.96 ಲಕ್ಷ ಮತದಾರರ ಹೆಸರು ಅಂತಿಮ ಹಂತಕ್ಕೆ

ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…

2 days ago

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಹೊಸ ವೇದಿಕೆ ಒಂದೇ ಆವರಣದಲ್ಲಿ ಬಾಕ್ಸಿಂಗ್, ಕುಸ್ತಿ, ಜೂಡೋ, ಕಬ್ಬಡಿ, ಬ್ಯಾಡ್ಮಿಂಟನ್, ಸ್ಕೇಟಿಂಗ್ ಸೌಲಭ್ಯ

ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…

3 days ago

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಅಭಿಯಾನ: ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕರೆತರಲು ಕ್ರಮ

  ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…

3 days ago

ಪಾಕಿಸ್ತಾನಿ ಗ್ಯಾಂಗ್‌ ಜೊತೆ ಸಂಪರ್ಕ ಆರೋಪ: ದೊಡ್ಡಬಳ್ಳಾಪುರದಲ್ಲಿ ವ್ಯಕ್ತಿ ಬಂಧನ

ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…

4 days ago