
ಗದಗ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಶಿರಹಟ್ಟಿ ತಾಲ್ಲೂಕು ಬಿಸಿಎಂ ಅಧಿಕಾರಿ ಎಂ.ಕೆ.ಸುರಕೋಡ ಅವರಿಗೆ ಸಂಬಂಧಿಸಿದ ಆರು ಕಡೆಗಳಲ್ಲಿ ಗುರುವಾರ ಬೆಳಿಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು, ಶೇ 227 ಅಧಿಕ ಆಸ್ತಿ ಹೊಂದಿರುವುದನ್ನು ಪತ್ತೆ ಮಾಡಿದ್ದಾರೆ.

ಲೋಕಾಯುಕ್ತ ಪೊಲೀಸರ ಶೋಧನೆ ವೇಳೆ ಅಧಿಕಾರಿಯ ಮನೆಯಲ್ಲಿ ಬಿಸಿಎಂ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸರಬರಾಜು ಮಾಡಲಾಗಿದ್ದ ಹಾಸಿಗೆ– ಬೆಡ್‌ಶೀಟ್‌ಗಳು, ಹಾಸ್ಟೆಲ್‌ನಲ್ಲಿ ಅಡುಗೆ ಮಾಡಲು ಬಳಸುವ ದೊಡ್ಡ ದೊಡ್ಡ ಪಾತ್ರೆಗಳು, ನೋಟ್‌ಪುಸ್ತಕಗಳು ಸಿಕ್ಕಿದ್ದು, ಅಧಿಕಾರಿಗಳನ್ನು ದಂಗುಬಡಿಸಿದೆ.

ಇವುಗಳ ಜತೆಗೆ, ₹13 ಲಕ್ಷ ಮೌಲ್ಯದ ಆರು ನಿವೇಶನಗಳು, ₹45 ಲಕ್ಷ ಮೌಲ್ಯದ ಮನೆ, ₹80.77 ಲಕ್ಷ ಮೌಲ್ಯದ 29 ಎಕರೆ ಜಮೀನು ಸೇರಿದಂತೆ ಒಟ್ಟು ₹1.38 ಕೋಟಿ ಮೌಲ್ಯದ ಸ್ಥಿರಾಸ್ತಿಗೆ ಸಂಬಂಧಿಸಿದ ಕಾಗದ ಪತ್ರಗಳು ಸಿಕ್ಕಿವೆ.

₹89 ಸಾವಿರ ನಗದು, ₹23.21 ಲಕ್ಷ ಮೌಲ್ಯದ 152 ಗ್ರಾಂ ಚಿನ್ನಾಭರಣ, ₹2.05 ಲಕ್ಷ ಮೌಲ್ಯದ ಬೆಳ್ಳಿ, ₹31.40 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು ₹1.82 ಕೋಟಿ ಆಸ್ತಿ ಪತ್ತೆ ಮಾಡಿದ್ದಾರೆ.