ದೊಡ್ಡಬಳ್ಳಾಪುರ: ಸತತ ಪರಿಶ್ರಮ ಮತ್ತು ಅಧ್ಯಯನಶೀಲತೆಯಿಂದ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಪರಿಸರವಾದಿ ಕೆ.ಗುರುದೇವ್ ಹೇಳಿದರು.
ನಗರದ ಶ್ರೀ ದೇವರಾಜ ಅರಸ್ ಅಂತಾರಾಷ್ಟ್ರೀಯ ವಸತಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯರನ್ನು ಗೌರವಿಸುವ ಗುಣ, ಸಮಾಜದೊಂದಿಗೆ ಬೆರೆಯುವ ಆಲೋಚನೆಗಳನ್ನು ಮಕ್ಕಳಲ್ಲಿ ರೂಢಿಸಬೇಕು. ಸಮಯಕ್ಕೆ ಹೆಚ್ಚಿನ ಆದ್ಯತೆ ನೀಡಿ ನಮ್ಮ ಹೊಣೆಯನ್ನು ಅರಿತುಕೊಂಡರೆ ಯಶಸ್ಸು ಸಾಧ್ಯ ಎಂದರು.
ಶ್ರೀ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಮಹತ್ವಾಕಾಂಕ್ಷೆಗಳನ್ನು ಮಕ್ಕಳಲ್ಲಿ ಬಿತ್ತುವ ಮೂಲಕ ಸದೃಢ ಭವಿಷ್ಯದ ಸಂಕಲ್ಪವನ್ನು ಮಾಡಬೇಕು. ನಿರ್ದಿಷ್ಟ ಗುರಿ ಮತ್ತು ಪ್ರಖರ ವಿಚಾರಧಾರೆಗಳನ್ನು ಪ್ರಚೋದಿಸುವ ಗುರು ಇದ್ದಾಗ ಸಮರ್ಥ ನಾಯಕತ್ವದ ಗುಣಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಭವಿಷ್ಯದ ಬಗ್ಗೆ ಧನಾತ್ಮಕ ಕನಸುಗಳನ್ನು ಬಿತ್ತುವುದು ಶಿಕ್ಷಣದ ಪರಮೋಚ್ಛ ಗುರಿಯಾಗಬೇಕು ಎಂದು ತಿಳಿಸಿದರು.
ಶಾಲೆಯ 10ನೇ ತರಗತಿ, 9ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿದ್ದುದು ವಿಶೇಷವಾಗಿತ್ತು. ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರು, ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಬಹುಮಾನ ನೀಡಿ ಅಭಿನಂದಿಸಲಾಯಿತು.
ಶಾಲೆಯ ಮುಖ್ಯಶಿಕ್ಷಕ ಜಿಯಾವುಲ್ಲಾಖಾನ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕರಾದ ಬಿ.ವಿಜಯ್‌ಕುಮಾರ್, ದೇವರಾಜ್, ಮಹಮ್ಮದ್ ಕೈಸರ್ ಪಾಷಾ, ರಶ್ಮಿ, ಕಾವ್ಯಶ್ರೀ, ಶ್ರೀನಿವಾಸ್ ಉಪಸ್ಥಿತರಿದ್ದರು.