ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮದುವೆ ವೆಚ್ಚದ ಹೊರೆಯನ್ನು ತಗ್ಗಿಸಿ, ಆರ್ಥಿಕವಾಗಿ ಹಿಂದುಳಿದ ವಧು-ವರರಿಗೆ ಆಸರೆಯಾಗಿದ್ದ ರಾಜ್ಯ ಸರ್ಕಾರದ ‘ಮಾಂಗಲ್ಯ ಭಾಗ್ಯ’ ಯೋಜನೆಗೆ ಮರುಜೀವ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ. ರಾಜ್ಯದ ಆದಾಯವಿರುವ ಎ ಮತ್ತು ಬಿ ದರ್ಜೆಯ ದೇಗುಲಗಳಲ್ಲಿ ಆಯೋಜಿಸಲಾಗುತ್ತಿದ್ದ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಕಳೆದ ಎರಡು ವರ್ಷಗಳಿಂದ ಬಹುತೇಕ ಕಡೆಗಳಲ್ಲಿ ಸ್ಥಗಿತಗೊಂಡಿರುವುದು ಬಡ ಕುಟುಂಬಗಳ ನಿರೀಕ್ಷೆಗೆ ತಣ್ಣೀರೆರಚಿದಂತಾಗಿದೆ.
ಮದುವೆ ಎಂದರೆ ಬಡ ಕುಟುಂಬಗಳಿಗೆ ಸಾಲದ ಹೊರೆ ಎಂಬ ಪರಿಸ್ಥಿತಿ ಇಂದಿಗೂ ಹಲವೆಡೆ ಇದೆ. ದುಬಾರಿ ಕಲ್ಯಾಣ ಮಂಟಪ, ಊಟೋಪಚಾರ, ಚಿನ್ನಾಭರಣ ಸೇರಿದಂತೆ ವಿವಿಧ ಖರ್ಚುಗಳನ್ನು ಭರಿಸಲಾಗದೆ ಅನೇಕ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಇಂತಹ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಆರಂಭಿಸಲಾಗಿದ್ದ ಸರಳ ಸಾಮೂಹಿಕ ವಿವಾಹ ಯೋಜನೆ ಇದೀಗ ನಿರೀಕ್ಷಿತ ಮಟ್ಟದಲ್ಲಿ ಅನುಷ್ಠಾನವಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.
‘ಸಪ್ತಪದಿ’ಯಿಂದ ‘ಮಾಂಗಲ್ಯ ಭಾಗ್ಯ’ಕ್ಕೆ
ಹಿಂದಿನ ಬಿಜೆಪಿ ಸರ್ಕಾರ ‘ಸಪ್ತಪದಿ’ ಹೆಸರಿನಲ್ಲಿ ಆರಂಭಿಸಿದ್ದ ಸರಳ ಸಾಮೂಹಿಕ ವಿವಾಹ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ‘ಮಾಂಗಲ್ಯ ಭಾಗ್ಯ’ ಎಂಬ ಹೆಸರಿನಲ್ಲಿ ಮುಂದುವರಿಸಿತ್ತು. ಆರಂಭದಲ್ಲಿ ರಾಜ್ಯದ ಆಯ್ದ 100 ದೇವಾಲಯಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಬಳಿಕ ದೇವಾಲಯಗಳ ಆದಾಯದ ಆಧಾರದಲ್ಲಿ ಎ ಮತ್ತು ಬಿ ದರ್ಜೆಯ ದೇಗುಲಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿತ್ತು.
ಈ ಯೋಜನೆಯಡಿ ರಾಜ್ಯದ ನೂರಾರು ಜೋಡಿಗಳು ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲು ಅವಕಾಶ ಪಡೆದಿವೆ. ಆದರೆ, ಕಳೆದ ಎರಡು ವರ್ಷಗಳಿಂದ ಯೋಜನೆಯ ಅನುಷ್ಠಾನದಲ್ಲಿ ವ್ಯತ್ಯಯ ಉಂಟಾಗಿದೆ. ಕೆಲವು ದೇವಾಲಯಗಳಲ್ಲಿ ಮಾತ್ರ ಕಳೆದ ವರ್ಷ ಆರಂಭದಲ್ಲಿ ವಿವಾಹ ಕಾರ್ಯಕ್ರಮಗಳು ನಡೆದಿದ್ದು, ಬಹುತೇಕ ಕಡೆಗಳಲ್ಲಿ ಸಾಮೂಹಿಕ ವಿವಾಹ ಆಯೋಜನೆಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಏನಿದು ಮಾಂಗಲ್ಯ ಭಾಗ್ಯ ಯೋಜನೆ?
ಆರ್ಥಿಕವಾಗಿ ಹಿಂದುಳಿದ ವಧು-ವರರಿಗೆ ಸರಳವಾಗಿ ಮದುವೆಯಾಗಲು ನೆರವಾಗುವುದು ಈ ಯೋಜನೆಯ ಪ್ರಮುಖ ಉದ್ದೇಶ. ದೇವಾಲಯದ ವತಿಯಿಂದ ಸಾಮೂಹಿಕ ವಿವಾಹ ಆಯೋಜಿಸಿ, ಅದಕ್ಕೆ ತಗಲುವ ವೆಚ್ಚವನ್ನು ದೇವಾಲಯದ ನಿಧಿಯಿಂದ ಭರಿಸುವ ವ್ಯವಸ್ಥೆ ಇದರಲ್ಲಿದೆ. ಯೋಜನೆಯಡಿ ವರನಿಗೆ ಅಂಗಿ, ಧೋತಿ ಹಾಗೂ 5,000 ನಗದು ನೀಡಲಾಗುತ್ತದೆ. ವಧುವಿಗೆ ಸೀರೆ, 1,000 ನಗದು ಮತ್ತು ಎಂಟು ಗ್ರಾಂ ಚಿನ್ನದ ತಾಳಿ-ಗುಂಡುಗಳನ್ನು ಒದಗಿಸಲಾಗುತ್ತದೆ. ವಧು-ವರರಿಗೆ ನೀಡುವ ಸೌಲಭ್ಯಗಳ ಒಟ್ಟು ಮೌಲ್ಯ ಸುಮಾರು 55,000 ಎಂದು ತಿಳಿಸಲಾಗಿದೆ. ಇದರೊಂದಿಗೆ ವಿವಾಹಕ್ಕೆ ಆಗಮಿಸುವ ಬಂಧುಗಳಿಗೆ ಊಟೋಪಚಾರದ ವ್ಯವಸ್ಥೆಯನ್ನೂ ದೇವಾಲಯದ ಆಡಳಿತ ಮಂಡಳಿ ಮಾಡುತ್ತದೆ.
ಈ ಸೌಲಭ್ಯಗಳಿಂದಾಗಿ ಮದುವೆಯ ಸಂದರ್ಭದಲ್ಲಿ ಎದುರಾಗುವ ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳಲು ಬಡ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಸಾಮಾನ್ಯವಾಗಿ ಮದುವೆಗಾಗಿ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಿಸುವ ಕುಟುಂಬಗಳಿಗೆ ಇಂತಹ ಯೋಜನೆ ಆರ್ಥಿಕ ನೆರವಿನ ಜತೆಗೆ ಸಾಮಾಜಿಕ ಬೆಂಬಲವನ್ನೂ ನೀಡುತ್ತದೆ.
ನಾಲ್ಕು ವರ್ಷಗಳಲ್ಲಿ 766 ಮದುವೆ
ಲಭ್ಯವಿರುವ ಮಾಹಿತಿಯ ಪ್ರಕಾರ, 2025ರ ಮೇ ವೇಳೆಗೆ ಹಿಂದಿನ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಸರಳ ಸಾಮೂಹಿಕ ವಿವಾಹ ಯೋಜನೆಯಡಿ ಒಟ್ಟು 766 ಮದುವೆಗಳು ನಡೆದಿವೆ. ಕೆಲವು ದೇವಾಲಯಗಳಲ್ಲಿ ಯೋಜನೆಗೆ ಉತ್ತಮ ಸ್ಪಂದನೆ ದೊರೆತಿದ್ದರೆ, ಇನ್ನೂ ಕೆಲವು ಕಡೆಗಳಲ್ಲಿ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ.
ರಾಜ್ಯದ ಎಲ್ಲ ಎ ಮತ್ತು ಬಿ ದರ್ಜೆಯ ದೇವಾಲಯಗಳಲ್ಲಿ ಯೋಜನೆ ಆಯೋಜಿಸುವಂತೆ ಸೂಚನೆ ನೀಡಲಾಗಿದ್ದರೂ, ಕೆಲವು ದೇವಾಲಯಗಳಲ್ಲಿ ಆದಾಯದ ಕೊರತೆಯಿಂದ ಕಾರ್ಯಕ್ರಮ ನಡೆಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಆದರೆ, ಕಳೆದ ವರ್ಷವೂ ಕೆಲವೇ ದೇವಾಲಯಗಳಲ್ಲಿ ವಿವಾಹ ಕಾರ್ಯಕ್ರಮಗಳು ನಡೆದಿದ್ದು, ಉಳಿದ ಕಡೆಗಳಲ್ಲಿ ಯೋಜನೆಗೆ ಚಾಲನೆ ದೊರೆಯದಿರುವುದು ಬಡ ಕುಟುಂಬಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಆದಾಯದ ಕೊರತೆಯೋ, ಮಾರ್ಗಸೂಚಿಯ ನಿರೀಕ್ಷೆಯೋ?
ಯೋಜನೆ ಅನುಷ್ಠಾನಗೊಳ್ಳದಿರುವುದಕ್ಕೆ ದೇವಾಲಯಗಳ ಆರ್ಥಿಕ ಸ್ಥಿತಿ ಒಂದು ಕಾರಣವೆಂದು ಹೇಳಲಾಗುತ್ತಿದ್ದರೆ, ಮತ್ತೊಂದೆಡೆ ಸರಳ ವಿವಾಹ ಆಯೋಜನೆಗೆ ಸಂಬಂಧಿಸಿದ ಸುತ್ತೋಲೆಗಾಗಿ ಕಾಯುತ್ತಿರುವುದಾಗಿ ಕೆಲವು ದೇವಾಲಯಗಳ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಯೋಜನೆ ಸ್ಥಗಿತಗೊಂಡಿರುವುದಕ್ಕೆ ಸಂಬಂಧಿಸಿದ ಕಾರಣಗಳನ್ನು ಸ್ಪಷ್ಟಪಡಿಸಿ, ಅನುಷ್ಠಾನದಲ್ಲಿರುವ ಅಡೆತಡೆಗಳನ್ನು ನಿವಾರಿಸುವ ಅಗತ್ಯವಿದೆ. ದೊಡ್ಡಬಳ್ಳಾಪುರ ತಾಲೂಕಿನ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿಯೂ ಯೋಜನೆ ಅನುಷ್ಠಾನದ ಕುರಿತು ಸ್ಪಷ್ಟ ಮಾರ್ಗಸೂಚಿಯ ನಿರೀಕ್ಷೆಯಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
ಮಾಂಗಲ್ಯ ಭಾಗ್ಯ ಯೋಜನೆಯಡಿ ಸರಳ ವಿವಾಹ ಆಯೋಜನೆಗೆ ಸಂಬಂಧಿಸಿದ ಸುತ್ತೋಲೆ ಬಂದಿಲ್ಲ. ಸುತ್ತೋಲೆ ಬಂದರೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಯೋಜನೆಯಿಂದ ಬಡ ವರ್ಗದ ವಧು-ವರರ ಮದುವೆಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಘಾಟಿ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ತಿಳಿಸಿದ್ದಾರೆ.
ಮಾಂಗಲ್ಯ ಭಾಗ್ಯ ಯೋಜನೆಯ ಅನುಷ್ಠಾನದ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ವಹಿಸಲು ಸೂಚಿಸಲಾಗುತ್ತದೆ ಎಂದು ಮುಜರಾಯಿ ಇಲಾಖೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದ್ದಾರೆ.
ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ನಡೆಸಿ, ಥಾಯ್ಲೆಂಡ್, ಬ್ಯಾಂಕಾಕ್ನಿಂದ…
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯ ಮತದಾನ ಪ್ರಕ್ರಿಯೆ ಜಿಲ್ಲೆಯಲ್ಲಿ ಸುಸೂತ್ರವಾಗಿ ನಡೆದಿದ್ದು, ಶೇಕಡ…
ದೊಡ್ಡಬಳ್ಳಾಪುರ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿಯಾಗಿ ಎ.ಪಿ. ರಂಗನಾಥ್ ಸ್ಪರ್ಧಿಸಿದ್ದು, ಅವರ ಪರವಾಗಿ ಎನ್ಡಿಎ ನಾಯಕರು, ಮುಖಂಡರು…
ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಕಾರ್ಯವು ಜಿಲ್ಲೆಯ 06 ಮತಗಟ್ಟೆಗಳಲ್ಲಿ ಸುಗಮವಾಗಿ ನಡೆಯುತ್ತಿದ್ದು ಅಪರಾಹ್ನ 12 ಗಂಟೆಯವರೆಗೆ ಶೇ.…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಲಘುಮೇನಹಳ್ಳಿ ಸೇರಿದಂತೆ ತೂಬಗೆರೆ ಸುತ್ತಮುತ್ತಲಿನ ಕೆಲ ಪ್ರದೇಶದಲ್ಲಿ ಶುಕ್ರವಾರ (ಅ.23) ಬೆಳಿಗ್ಗೆ ಸುಮಾರು…
ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಬರದ ತೀವ್ರತೆ, ಅಂತರ್ಜಲ ಮಟ್ಟ ಕುಸಿತ ಹಾಗೂ ಕುಡಿಯುವ ನೀರಿನ ಕೊರತೆಯಿಂದ ತತ್ತರಿಸುತ್ತಿರುವ ಬೆಂಗಳೂರು ಗ್ರಾಮಾಂತರ…