ಜಮೀನು ಸರ್ವೇ ವಿಚಾರದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರ ತಡೆಗೆ ಇನ್ಮುಂದೆ ರೋವರ್ ತಂತ್ರಜ್ಞಾನವನ್ನು ಸರ್ಕಾರ ಬಳಸಲಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ಇದರಿಂದ ಭೂಮಿ ಸರ್ವೇ ಕಾರ್ಯ ಕೇವಲ ಎಂಟು ನಿಮಿಷಗಳಲ್ಲೇ ಮುಗಿಯಲಿದೆ. ಕಡಿಮೆ ಅವಧಿಯಲ್ಲಿ ಸರ್ವೇ ಕೆಲಸ ಮುಗಿಯುವುದರಿಂದ ಸರ್ವೇಯರ್‌ಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಸ್ಯಾಟಲೈಟ್‌ನಿಂದ ಮಾಹಿತಿ ಪಡೆದು ಸ್ವಯಂಚಾಲಿತವಾಗಿ ನಕ್ಷೆ ಸಿದ್ಧವಾಗಲಿದೆ ಎಂದು ತಿಳಿಸಿದ್ದಾರೆ.
ಹಿಂದಿನಿಂದಲೂ ಚೈನ್ ಹಿಡಿದೇ ಭೂಮಿ ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಹೆಚ್ಚಾಗಿ ಮನುಷ್ಯನ ಹಸ್ತಕ್ಷೇಪ ಇರುವುದರಿಂದ ಭ್ರಷ್ಟಾಚಾರಕ್ಕೆ ಅವಕಾಶವಿತ್ತು. ಒಂದು ನಕ್ಷೆ ತಯಾರಿಸಲು ಮೂವರು 50 ರಿಂದ 70 ನಿಮಿಷ ಭೂಮಿ ಸರ್ವೇ ನಡೆಸಿ ಬಳಿಕ ಕಚೇರಿಗೆ ಬಂದು ನಕ್ಷೆ ಬಿಡಿಸಲು 3 ತಾಸು ಬೇಕಾಗಿತ್ತು. ಆದರೆ, ಈಗ ರೋವರ್ ಬಳಕೆಯಿಂದ 8 ನಿಮಿಷದಲ್ಲಿ ಎಲ್ಲವೂ ಮುಗಿಯಲಿದೆ. ಸ್ಯಾಟಲೈಟ್‌ನಿಂದ ಮಾಹಿತಿ ಪಡೆದು ಸ್ವಯಂಚಾಲಿತವಾಗಿ ನಕ್ಷೆ ಸಿದ್ಧಪಡಿಸಲಿದೆ. ಅಧಿಕಾರಿಗಳಿಗೆ ಲಂಚ ನೀಡಿ ಬೇಕಾದ ರೀತಿ ನಕ್ಷೆ ಪಡೆಯುವ ಕ್ರಮಕ್ಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಕಡಿಮೆ ಅವಧಿಯಲ್ಲಿ ಸರ್ವೇ ಕೆಲಸ ಮುಗಿಯಲಿದ್ದು, ಸರ್ವೇಯರ್‌ಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ ಎಂದು ತಿಳಿಸಿದರು.
ಸರ್ಕಾರಿ ಮತ್ತು ಪರವಾನಗಿ ಹೊಂದಿರುವ ಸರ್ವೇಯರ್‌ಗಳಿಗೂ ವಿತರಿಸಲು 5 ಸಾವಿರ ರೋವರ್ ಖರೀದಿಗೆ ನಿರ್ಧರಿಸಲಾಗಿದೆ. ಮುಂದಿನ 8 ತಿಂಗಳ ಒಳಗಾಗಿ ಸರ್ವೇ ಕೆಲಸ ಸಂಪೂರ್ಣ ಡಿಜಿಟಲ್ ಆಗಬೇಕೆಂಬುದು ನಮ್ಮ ಆಶಯ ಎಂದರು.
ರೋವರ್ ತಂತ್ರಜ್ಞಾನ ವಿಶೇಷತೆ…
ಸರ್ವೇಯರ್‌ಗಳಿಗೆ 5 ಕೆಜಿ ತೂಕದ ಚೈನ್ ಹಿಡಿದು ಜಮೀನು ಅಳೆಯುವುದು ಸವಾಲಿನ ಕೆಲಸವಾಗಿತ್ತು. ಗುಡ್ಡಗಾಡು, ಕೆರೆ, ಅರಣ್ಯ ಪ್ರದೇಶಗಳಲ್ಲಿ ಸರ್ವೇ ಕ್ಲಿಷ್ಟರವಾಗಿತ್ತು. ಇದೀಗ ರೋವರ್ ಉಪಕರಣದಿಂದ ಸುಲಭವಾಗಿದೆ. ಇದು 800 ಗ್ರಾಂ ಇದ್ದು, ಆಧುನಿಕ ತಂತ್ರಜ್ಞಾನ ಉಪಕರಣವಾಗಿದೆ. ಸರ್ವೇ ಆಫ್ ಇಂಡಿಯಾ ರಾಜ್ಯದಲ್ಲಿ 49 ಕಂಟಿನ್ಯೂಸ್ಲಿ ಅಪರೇಟಿಂಗ್ ರೆಫರೆನ್ಸ್ ಸ್ಟೇಷನ್ (ಸಿಒಆರ್‌ಎಸ್) ಸ್ಥಾಪನೆ ಮಾಡಿದೆ. ಇದರೊಂದಿಗೆ ರೋವರ್ ಸಂಪರ್ಕ ಕಲ್ಪಿಸಿ ಜಮೀನು ಸರ್ವೇ ನಡೆಸಿದಾಗ ಸ್ವಯಂಚಾಲಿತವಾಗಿ ಗಡಿ ಗುರುತು ಮಾಡಿ ಟ್ಯಾಬ್‌ಗೆ ಸಂಪರ್ಕ ನೀಡಲಿದೆ. 2 ಸೆಂಟಿ ಮೀಟರ್ ಮಾತ್ರ ವ್ಯತ್ಯಾಸ ಬರಲಿದೆ. 6 ತಿಂಗಳಿಂದ ಪ್ರಾಯೋಗಿಕವಾಗಿ ಬಳಕೆ ಮಾಡಿದ್ದು, ಸರ್ವೇಯರ್ ಗಳಿಗೆ ತರಬೇತಿ ನೀಡಲಾಗಿದೆ. ರೋವರ್ ಒಂದಕ್ಕೆ 3.50 ಲಕ್ಷ ರೂ. ಆಗಲಿದೆ ಎಂದು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತ ಜೆ. ಮಂಜುನಾಥ್ ಮಾಹಿತಿ ನೀಡಿದರು.