ಭಾವಚಿತ್ರ ಇರುವ 2024ರ ಮತದಾರರ ಕರಡು ಪಟ್ಟಿ ಪ್ರಕಟ: ಆಕ್ಷೇಪ ಸಲ್ಲಿಕೆಗೆ ಡಿ.9ಕ್ಕೆ ಕೊನೆ ದಿನ

ಭಾವಚಿತ್ರ ಇರುವ 2024ರ ಮತದಾರರ ಕರಡು ಪಟ್ಟಿಯನ್ನು ಶುಕ್ರವಾರ ಬೆಂಗಳುರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಕಚೇರಿ, ಗ್ರಾಮ ಪಂಚಾಯಿತಿ, ನಗರಸಭೆ  ಸೇರಿದಂತೆ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಅಲ್ಲದೇ ಎಲ್ಲಾ ರಾಜಕೀಯ ಪಕ್ಷಗಳಿಗೂ ಉಚಿತವಾಗಿ ಒಂದು ಪ್ರತಿಯನ್ನು ನೀಡಲಾಗಿದೆ ಎಂದು ಉಪವಿಭಾಗಾಧಿಕಾರಿ ಶ್ರೀನಿವಾಸ್ ಹೇಳಿದರು.

ನಗರದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ವಿವಿಧ ರಾಜಕೀಯ ಪಕ್ಷಗಳ ಅಧ್ಯಕ್ಷರು ಹಾಗೂ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರತಿ ವರ್ಷವು ನಿರಂತರವಾಗಿ ನಡೆಯಲಿದೆ. ಇದರಂತೆ 2024ರ ಮತದಾರರ ಪಟ್ಟಿ ಪರಿಷ್ಕರಣೆಗೆ ಕರಡು ಪ್ರತಿಯನ್ನು ಪ್ರಕಟಿಸಲಾಗಿದೆ. ಮತದಾರರ ಕರಡು ಪಟ್ಟಿಯ ಕುರಿತಂತೆ ಆಕ್ಷೇಪಣೆಗಳು ಇದ್ದರೆ ನಿಗದಿತ ನಮೂನೆಯಲ್ಲಿ ಡಿಸೆಂಬರ್ 9ರ ಒಳಗೆ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.

ಇದಲ್ಲದೆ ನವೆಂಬರ್ 18 ಮತ್ತು 19 ಹಾಗೂ ಡಿಸೆಂಬರ್ 2 ರಂದು ವಿಶೇಷ ಮತಗಟ್ಟೆ ಆಂದೋಲನಗಳನ್ನು ನಡೆಸಲಾಗುವುದು. ಮತದಾರರು ಹಾಗೂ ರಾಜಕೀಯ ಪಕ್ಷಗಳ ಮುಖಂಡರಿಂದ ಬಂದಿರುವ ಆಕ್ಷೇಪಣೆಗಳನ್ನು ಡಿಸೆಂಬರ್ 26ರ ಒಳಗೆ ಇತ್ಯರ್ಥಗೊಳಿಸಲಾಗುವುದು. ಅಂತಿಮ ಮತದಾರರ ಪಟ್ಟಿಯನ್ನು 2024ರ ಜನವರಿ 5 ರಂದು ಪ್ರಕಟಿಸಲಾಗುವುದು ಎಂದರು.

ಈಗ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ 8,81,961 ಮತದಾರರು ಇದ್ದಾರೆ. ಇದರಲ್ಲಿ 4,37,579 ಪುರುಷರು, 4,44,237 ಮಹಿಳೆಯರು ಹಾಗೂ 145 ಜನ ಇತರೆ ಮತದಾರರು ಇದ್ದಾರೆ. ಒಟ್ಟು ಮತದಾರರ ಸಂಖ್ಯೆಯಲ್ಲಿ 80 ವರ್ಷ ಮೇಲ್ಪಟ್ಟ ಮತದಾರರು 20,144. ಅಗವಿಕಲ ಮತದಾರರು 12,624 ಹಾಗೂ ಸೇವಾ ಮತದಾರರು 128. ನಾಲ್ಕು ತಾಲ್ಲೂಕುಗಳಿಂದ ಒಟ್ಟು 1,137 ಮತಗಟ್ಟೆಗಳಿವೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ನಗರ ಘಟಕದ ಅಧ್ಯಕ್ಷ ವಿ.ಎಸ್.ರವಿಕಮಾರ್ ಮಾತನಾಡಿ, ಮತದಾರರ ಗುರುತಿನ ಚೀಟಿಗಳು ಅಂಚೆ ಮೂಲಕ ಮತದಾರರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಆದರೆ ಅಂಚೆ ಇಲಾಖೆಯವರು ಮತದಾರರ ಮನೆಗಳಿಗೆ ತಲುಪಿಸದೆ ಮತಗಟ್ಟೆ ಅಧಿಕಾರಿಗಳಿಗೆ ನೀಡುತ್ತಿದ್ದಾರೆ. ಇದರಿಂದ ಮತದಾರರು ಗುರುತಿನ ಚೀಟಿ ಬರದಿದ್ದರೆ ಯಾರನ್ನು ಕೇಳಬೇಕು ಎನ್ನುವ ಗೊಂದಲವನ್ನು ನಿವಾರಿಸಬೇಕು ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗೋವಿಂದರಾಜು, ಬಿಜೆಪಿ ಮುಖಂಡ ಮಂಜುನಾಥ್ ಮಾತನಾಡಿ, ರಾಜಕೀಯ ಪಕ್ಷಗಳ ವತಿಯಂದ ಅಧಿಕೃತವಾಗಿ ನೇಮಿಸಿಕೊಳ್ಳಲಾಗಿರುವ ವ್ಯಕ್ತಿಗಳಿಗೆ ಬಿಎಲ್ಒ-2 ಗುರುತಿಚಿನ ಚೀಟಿಗಳನ್ನು ತಾಲ್ಲೂಕು ಚುನಾವಣ ಶಾಖೆಯಿಂದ ವಿತರಿಸಬೇಕು. ಇದರಿಂದ ಮತದಾರರ ಪಟ್ಟಿ ಪರಿಷ್ಕರಣೆ, ಹೊಸ ಮತದಾರರ ನೋಂದಣಿ ಸೇರಿದಂತೆ ಹಲವಾರು ಸಮಸ್ಯೆಗಳು ಪರಿಹಾರವಾಗಲಿವೆ ಎಂದರು.

ಸಭೆಯಲ್ಲಿ ಗ್ರೇಡ್-2 ತಹಶೀಲ್ದಾರ್ ಪ್ರಕಾಶ್, ಚುನಾವಣ ಶಿರಸ್ತೆದಾರ್ ಕಿರಣ್ ಕುಮಾರ್, ಉಪವಿಭಾಗಾಧಿಕಾರಿಗಳ ಚುನಾವಣ ವಿಭಾಗದ ರಘುನಂದನ್ ಇದ್ದರು.

Leave a Reply

Your email address will not be published. Required fields are marked *