ಭಾರತ ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್ ನಿಧನ

ಭಾರತ ಮಾಧ್ಯಮ ಲೋಕದ ದಿಗ್ಗಜ ಎಂದೇ ಖ್ಯಾತಿ ಪಡೆದ ರಾಮೋಜಿ ಗ್ರೂಪ್ಸ್‌ ಸಂಸ್ಥಾಪಕ ರಾಮೋಜಿ ರಾವ್ ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ ನ ಸ್ಟಾರ್ ಆಸ್ಪತ್ರೆಯಲ್ಲಿ ಇಂದು ಮುಸುಕಿನ ಜಾವ 3:45ಕ್ಕೆ ಅಗಲಿದ್ದಾರೆ ಎಂದು ತಿಳಿದು ಬಂದಿದೆ.

ಜೂನ್ 5ರಂದು ಹೃದಯ ಸಂಬಂಧಿ ಸಮಸ್ಯೆಯಿಂದ ಉಸಿರಾಟಕ್ಕೆ ತೀವ್ರ ತೊಂದರೆಯಾಗಿತ್ತು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯಕೀಯ ಪರೀಕ್ಷೆಯ ನಂತರ ಹೃದಯ ಸ್ಟೆಂಟ್ ಹಾಕಲಾಯಿತು. ಬಳಿಕ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದಾರೂ ಚಿಕಿತ್ಸೆ ಫಲಿಸದೇ ನಿಧನಾರಾಗಿದ್ದಾರೆ ಎನ್ನಲಾಗಿದೆ.

ರಾಮೋಜಿ ರಾವ್ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಇರುವ ಅವರ ಮನೆಗೆ ರವಾನಿಸಿ, ನಿವಾಸದಲ್ಲೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪೆದಪರುಪುಡಿ ಗ್ರಾಮದಲ್ಲಿ 1936ರ ನವೆಂಬರ್ 16 ರಂದು ಕೃಷಿಕ ಕುಟುಂಬದಲ್ಲಿ ಜನಿಸಿದರು. ಭವ್ಯವಾದ ರಾಮೋಜಿ ಫಿಲ್ಮ್‌ ಸಿಟಿಯ ನಿರ್ಮಾತೃಗಳು. ವಿಶ್ವದ ಅತಿ ದೊಡ್ಡ ಥೀಮ್ ಪಾರ್ಕ್‌ ಹಾಗೂ ಸಿನಿಮಾ ಸ್ಟುಡಿಯೋ ಅನ್ನೋ ಹೆಗ್ಗಳಿಕೆ ರಾಮೋಜಿ ಫಿಲ್ಮ್‌ ಸಿಟಿಗೆ ಇದೆ.

ಮಾರ್ಗದರ್ಶಿ ಚಿಟ್ ಫಂಡ್, ಈನಾಡು ಪತ್ರಿಕೆ, ಈಟಿವಿ ನೆಟ್‌ವರ್ಕ್, ರಮಾದೇವಿ ಪಬ್ಲಿಕ್ ಸ್ಕೂಲ್, ಪ್ರಿಯಾ ಫುಡ್ಸ್, ಕಲಾಂಜಲಿ, ಉಷಾಕಿರಣ್ ಮೂವೀಸ್, ಮಯೂರಿ ಫಿಲ್ಮ್ ಡಿಸ್ಟ್ರಿಬ್ಯೂಟರ್ಸ್ ಮತ್ತು ಡಾಲ್ಫಿನ್ ಗ್ರೂಪ್ ಆಫ್ ಹೋಟೆಲ್‌ಗಳು ರಾಮೋಜಿ ರಾವ್ ಒಡೆತನದ ಕಂಪನಿಗಳಾಗಿವೆ. ರಾಜಕೀಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ

ಶ್ರೀ ರಾಮೋಜಿ ರಾವ್ ಅವರ ಅಗಲಿಕೆ ಅತ್ಯಂತ ದುಃಖ ತಂದಿದೆ.  ಅವರು ಭಾರತೀಯ ಮಾಧ್ಯಮದಲ್ಲಿ ಕ್ರಾಂತಿಯನ್ನು ಮಾಡಿದ ದಾರ್ಶನಿಕರಾಗಿದ್ದರು. ಅವರ ಶ್ರೀಮಂತ ಕೊಡುಗೆಗಳು ಪತ್ರಿಕೋದ್ಯಮ ಮತ್ತು ಚಲನಚಿತ್ರಗಳ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ. ಅವರು ಮಾಧ್ಯಮ ಮತ್ತು ಮನರಂಜನಾ ಜಗತ್ತಿನಲ್ಲಿ ನಾವೀನ್ಯತೆ ಮತ್ತು ಶ್ರೇಷ್ಠತೆಗಾಗಿ ಹೊಸ ಮಾನದಂಡಗಳನ್ನು ಸ್ಥಾಪಿಸಿದರು ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

 ರಾಮೋಜಿ ರಾವ್ ಅವರು ಭಾರತದ ಅಭಿವೃದ್ಧಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು  ಅವರೊಂದಿಗೆ ಸಂವಹನ ನಡೆಸಲು ಮತ್ತು ಅವರ ಬುದ್ಧಿವಂತಿಕೆಯಿಂದ ಪ್ರಯೋಜನ ಪಡೆಯಲು ಹಲವಾರು ಅವಕಾಶಗಳನ್ನು ಪಡೆದಿರುವುದು ನನ್ನ ಅದೃಷ್ಟ ಎಂದು ನೆನೆದು ಭಾವುಕರಾಗಿದ್ದಾರೆ.

Leave a Reply

Your email address will not be published. Required fields are marked *