ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಸೋನಿಯಾ ಗಾಂಧಿ ಅವರ ಲೇಖನದ ಕನ್ನಡ ಅನುವಾದ
“ಭಾರತವು ಧ್ವನಿ ಎತ್ತಬೇಕಾದ ಕಾಲ ಇನ್ನೂ ಮಿಂಚಿಹೋಗಿಲ್ಲ”
ಜೂನ್ 13, 2025 ರಂದು ಇರಾನ್ ಮತ್ತು ಅದರ ಸಾರ್ವಭೌಮತೆಯ ಮೇಲೆ ಇಸ್ರೇಲ್ ನಡೆಸಿದ ಅತ್ಯಂತ ಕಿರುಕುಳಕಾರಿ ಮತ್ತು ಅಕ್ರಮ ಸೇನಾ ಕಾರ್ಯಾಚರಣೆಯಿಂದಾಗಿ ಏಕಪಕ್ಷೀಯ ಸೇನಾ ಕಾರ್ಯಾಚರಣೆಯ ಅಪಾಯಕಾರಿ ಪರಿಣಾಮಗಳನ್ನು ಜಗತ್ತು ಮತ್ತೊಮ್ಮೆ ಕಾಣುವಂತಾಗಿದೆ.
ಇರಾನ್ ನೆಲದಲ್ಲಿ ನಡೆಯುತ್ತಿರುವ ಈ ಬಾಂಬ್ ದಾಳಿಗಳು ಮತ್ತು ಉದ್ದೇಶಿತ ಹತ್ಯೆಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಖಂಡಿಸುತ್ತದೆ. ಇವು ಸ್ಥಳೀಯ ಮತ್ತು ಜಾಗತಿಕ ಶಾಂತಿಗೆ ಭಂಗ ಉಂಟುಮಾಡುವ ಬೆಳವಣಿಗೆಯಾಗಿದ್ದು, ಜನರ ಜೀವಗಳನ್ನು ತೀವ್ರ ಅಪಾಯಕ್ಕೆ ಒಡ್ಡಿವೆ. ಇಂತಹ ಕೃತ್ಯಗಳು ಸುಭದ್ರತೆಯನ್ನು ಹಾಳುಗೆಡವಿ, ಭವಿಷ್ಯದಲ್ಲಿ ಸ್ಥಳೀಯ ಹಾಗೂ ಜಾಗತಿಕ ಸಂಘರ್ಷಗಳಿಗೆ ಕಾರಣವಾಗುತ್ತವೆ.
ಗಾಝಾದ ಮೇಲಿನ ಭಯಾನಕ ದಾಳಿಗಳು ಒಳಗೊಂಡಂತೆ ಇಸ್ರೇಲ್ ನ ಇತ್ತೀಚಿನ ವರ್ತನೆಗಳು ಸಾರ್ವಜನಿಕರ ಬದುಕು ಹಾಗೂ ಸ್ಥಳೀಯ ಭದ್ರತೆಗೆ ಮಾರಕವಾಗಿದೆ. ಇಂತಹ ಕೃತ್ಯಗಳು ದೀರ್ಘಕಾಲದ ಸುಸ್ಥಿರತೆಯನ್ನು ನಾಶಪಡಿಸುವ ಜೊತೆಯಲ್ಲಿ ಭವಿಷ್ಯದಲ್ಲಿ ಮತ್ತಷ್ಟು ಸಂಘರ್ಷಗಳಿಗೆ ದಾರಿ ಮಾಡಿಕೊಡಲಿದೆ.
ಇರಾನ್ ಮತ್ತು ಅಮೇರಿಕಾ ನಡುವಿನ ಶಾಂತಿ ಮಾತುಕತೆಗಳು ಪ್ರಗತಿ ಕಾಣುತ್ತಿದ್ದ ಸಂದರ್ಭದಲ್ಲಿ ಇಂಥದ್ದೊಂದು ದಾಳಿ ನಡೆದದ್ದು ವಿಷಾದನೀಯ. ಈ ವರ್ಷ ಐದು ಸುತ್ತಿನ ಮಾತುಕತೆಗಳು ಯಶಸ್ವಿಯಾಗಿ ನಡೆದಿದ್ದವು; ಆರನೆಯದು ಜೂನ್‌ನಲ್ಲಿ ನಡೆಯಬೇಕಾಗಿತ್ತು. 2025 ಮಾರ್ಚ್‌ನಲ್ಲಿ, ಅಮೇರಿಕಾದ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳ್ಸಿ ಗಬ್ಬಾರ್ಡ್, ‘’ ಇರಾನ್ ತನ್ನ ಅಣ್ವಸ್ತ್ರ ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸಿಲ್ಲ ಹಾಗೂ 2003 ಸ್ಥಗಿತಗೊಂಡ ನಂತರ ಅದಕ್ಕೆ ಮರುಚಾಲನೆ ನೀಡುವ ಬಗ್ಗೆ ಇರಾನ್ ನ ಪರಮೋಚ್ಛ ನಾಯಕ ಅಯಾತುಲ್ಲಾ ಅಲಿ ಖಮೇನೈ ಅವರು ಯಾವುದೇ ಅಧಿಕೃತ ಆದೇಶ ನೀಡಿಲ್ಲ’’ ಎಂದು ಸ್ಪಷ್ಟಪಡಿಸಿದ್ದರು.
ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ನೇತೃತ್ವದ ಇಸ್ರೇಲ್ ಸರ್ಕಾರ ಶಾಂತಿ ಸ್ಥಾಪನೆಯ ಪ್ರಯತ್ನವನ್ನು ದಮನಿಸಿ ಉಗ್ರಗಾಮಿ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತಾ ಬಂದಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಗಾಜಾದಲ್ಲಿ ಇಸ್ರೇಲ್‌ನ ಅತಿರೇಕಕಾರಿ ಕಾರ್ಯಾಚರಣೆಗಳು ಮತ್ತು ಅಕ್ರಮ ವಸತಿಪ್ರದೇಶದ ಸ್ಥಾಪನೆ ಆ ಪ್ರದೇಶದ ಶಾಂತಿಗೆ ಇನ್ನಷ್ಟು ತೊಡಕನ್ನು ಉಂಟುಮಾಡುತ್ತಿದೆ. ಉಗ್ರರಾಷ್ಟ್ರೀಯತಾವಾದಿ ಗುಂಪುಗಳ ಜೊತೆಗಿನ ಅವರ ಮೈತ್ರಿ ಮತ್ತು ಅವರು ಪ್ರತಿಪಾದಿಸುತ್ತಿರುವ ದ್ವಿರಾಷ್ಟ್ರ ನೀತಿಯ ಪರಿಹಾರದ ಕ್ರಮಗಳು ಪ್ಯಾಲೆಸ್ತೀನ್ ಜನರ ಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಿರುವ ಜೊತೆಗೆ ಗಡಿಭಾಗದಲ್ಲಿ ವಾಸಿಸುವ ಜನರನ್ನು ವಿನಾಶಕಾರಿ ಸಂಘರ್ಷದ ಹಾದಿಗೆ ತಳ್ಳಿದೆ.
1995ರಲ್ಲಿ ನೆತನ್ಯಾಹು ನೆರವಿನಿಂದ ಭುಗಿಲೆದ್ದ ವಿದ್ವೇಷದ ಬೆಂಕಿ ಅಂತಿಮವಾಗಿ ಇಸ್ರೇಲ್ ಪ್ರಧಾನಿ ಇಟ್ಜ್ಯಾಕ್ ರಾಬಿನ್ ಹತ್ಯೆಯಲ್ಲಿ ಕೊನೆಗೊಂಡಿರುವ ಇತಿಹಾಸವನ್ನು ಪ್ರಸಕ್ತ ವಿದ್ಯಮಾನ ನೆನಪಿಸುತ್ತದೆ. ಹಿಂದಿನ ಈ ಎಲ್ಲಾ ದಾಖಲೆಗಳನ್ನು ಗಮನಿಸಿದರೆ, ನೆತನ್ಯಾಹು ಅವರು ಮಾತುಕತೆಯ ಬದಲು ಸಂಘರ್ಷವನ್ನು ಆಯ್ಕೆ ಮಾಡಿರುವುದು ಅಚ್ಚರಿಯ ವಿಷಯವೇನಲ್ಲ. ಆದರೆ ಅತ್ಯಂತ ವಿಷಾದನೀಯ ಸಂಗತಿಯೆಂದರೆ ಅದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡೆ. ಈ ಹಿಂದೆ ಟ್ರಂಪ್ ಅವರು ಅಮೇರಿಕಾ ನಡೆಸುತ್ತಿದ್ದ ನಿರಂತರವಾದ ಯುದ್ಧಗಳ ವಿರುದ್ಧ ಮತ್ತು ರಕ್ಷಣಾ ವಲಯದ ಕೈಗಾರಿಕೆಗಳ (military-industrial complex) ಸಂಕೀರ್ಣ ಪ್ರಭಾವದ ವಿರುದ್ಧ ಮಾತನಾಡಿದ್ದರು. ಜೊತೆಗೆ ಇರಾಕ್ ಅಣ್ವಸ್ತ್ರಗಳನ್ನು ಹೊಂದಿದೆ ಎಂಬ ದುರುದ್ದೇಶಪೂರಿತ ಸುಳ್ಳು ಆರೋಪಗಳು ಸ್ಥಳೀಯ ಅಸ್ಥಿರತೆ ಮತ್ತು ಭೀಕರ ನಾಶಕ್ಕೆ ಕಾರಣವಾದ ಇರಾಕ್ ಯುದ್ಧವನ್ನು ಹೇಗೆ ಹುಟ್ಟುಹಾಕಿದ್ದವು ಎಂಬುದನ್ನು ಹಿಂದೆ ಟ್ರಂಪ್ ಅವರೇ ಹಲವು ಬಾರಿ ಉಲ್ಲೇಖಿಸಿದ್ದರು.
ಹಾಗಾಗಿ, ತಮ್ಮದೇ ರಾಷ್ಟ್ರೀಯ ಗುಪ್ತಚರ ವಿಭಾಗದ ಮುಖ್ಯಸ್ಥರ ವರದಿಯನ್ನು ತಳ್ಳಿಹಾಕಿ, ಇರಾನ್ “ಅಣ್ವಸ್ತ್ರ ಸಾಮರ್ಥ್ಯ ಹೊಂದಲು ಅತ್ಯಂತ ಸಮೀಪದಲ್ಲಿದೆ” ಎಂದು ಟ್ರಂಪ್ ಹೇಳಿರುವುದು ಅತ್ಯಂತ ನಿರಾಶದಾಯಕವಾಗಿದೆ. ಇಂದು ವಿಶ್ವಕ್ಕೆ ವಾಸ್ತವಸ್ಥಿತಿಯ ಅರಿವು ಇರುವ ಮತ್ತು ರಾಜತಾಂತ್ರಿಕ ಕ್ರಮಗಳನ್ನು ಅನುಸರಿಸುವ ನಾಯಕತ್ವದ ಅವಶ್ಯಕತೆ ಇದೆಯೇ ಹೊರತು, ಬಲಪ್ರಯೋಗ ಅಥವಾ ಮಿಥ್ಯೆಗಳನ್ನು ಆಧರಿಸಿದ ನಾಯಕತ್ವವಲ್ಲ.
*ದ್ವಂದ್ವನೀತಿಗೆ ಅವಕಾಶವಿಲ್ಲ*
ಮಧ್ಯಪ್ರಾಚ್ಯದ ಸಂಕೀರ್ಣಮಯ ಇತಿಹಾಸದ ಹಿನ್ನೆಲೆಯಲ್ಲಿ ಅಣ್ವಸ್ತ್ರವನ್ನು ಪಡೆಯಲು ನಡೆಸಲಾಗುತ್ತಿರುವ ಇರಾನ್ ಬಗ್ಗೆ ಇಸ್ರೇಲ್‌ನ ಭದ್ರತಾ ಕಾಳಜಿಗಳನ್ನು ಕಡೆಗಣಿಸಲಾಗುವುದಿಲ್ಲ. ಆದರೆ ಇಲ್ಲಿ ದ್ವಂದ್ವ ನಿಲುವುಗಳಿಗೆ ಯಾವುದೇ ಅವಕಾಶವಿರಬಾರದು. ಇಸ್ರೇಲ್ ಸ್ವತಃ ಅಣ್ವಸ್ತ್ರ ರಾಷ್ಟ್ರವಾಗಿದ್ದು, ತನ್ನ ನೆರೆರಾಷ್ಟ್ರಗಳ ವಿರುದ್ಧ ಸೇನಾ ಆಕ್ರಮಣ ಮಾಡಿರುವ ದೀರ್ಘ ಇತಿಹಾಸವನ್ನು ಹೊಂದಿದೆ.
ಇದಕ್ಕೆ ವಿರುದ್ಧವಾಗಿ, ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ನಿಷೇಧದ ಒಪ್ಪಂದಕ್ಕೆ (NPT) ಸಹಿ ಹಾಕಿರುವ ರಾಷ್ಟ್ರವಾಗಿದೆ. ತನ್ನ ಮೇಲಿನ ಆರ್ಥಿಕ ನಿರ್ಬಂಧವನ್ನು ತೆರವುಗೊಳಿಸಿಕೊಳ್ಳುವ ಸಲುವಾಗಿ 2015ರ ಜಂಟಿ ಸಮಗ್ರ ಕ್ರಿಯಾ ಯೋಜನೆಯ (JCPOA) ಅಡಿಯಲ್ಲಿ, ಯುರೇನಿಯಂ ಬಳಕೆಯ ಮೇಲಿನ ಕಠಿಣ ನಿರ್ಬಂಧಗಳನ್ನು ಅನುಸರಿಸಲು ಒಪ್ಪಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ ರಾಷ್ಟ್ರಗಳು, ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್‌ನ ಬೆಂಬಲದೊಂದಿಗೆ, ಅಂತಾರಾಷ್ಟ್ರೀಯ ವೀಕ್ಷಕರಿಂದ ಈ ಒಪ್ಪಂದವನ್ನು ದೃಢೀಕರಿಸಲಾಗಿತ್ತು.
ಆದರೆ, 2018ರಲ್ಲಿ ಅಮೇರಿಕಾವು ಈ ಒಪ್ಪಂದವನ್ನು ಏಕಪಕ್ಷೀಯವಾಗಿ ಮುರಿದು, ದೀರ್ಘಕಾಲದ ರಾಜತಾಂತ್ರಿಕ ಸಂಬಂಧಗಳನ್ನು ಹಾಳುಮಾಡುವ ಜೊತೆಗೆ ದುರ್ಬಲಗೊಂಡಿದ್ದ ಪ್ರಾದೇಶಿಕ ಸ್ಥಿರತೆಯನ್ನು ಮತ್ತಷ್ಟು ಅಸ್ಥಿರಗೊಳಿಸುತ್ತಿದೆ.
ಈ ಬೆಳವಣಿಗೆಯಿಂದಾಗಿ ಭಾರತವೂ ಹಲವು ದುಷ್ಪರಿಣಾಮಗಳನ್ನು ಎದುರಿಸಬೇಕಾಗಿದೆ. ಇರಾನ್ ಮೇಲೆ ಮರಳಿ ಹೇರಲ್ಪಟ್ಟ ನಿರ್ಬಂಧವು ಮಧ್ಯ ಏಷ್ಯಾ ಜೊತೆಗೆ ನಿಕಟ ಸಂಪರ್ಕ ಸಾಧಿಸುವ ಮತ್ತು ಅಫ್ಘಾನಿಸ್ತಾನಕ್ಕೆ ನೇರಸಂಪರ್ಕದ ಅವಕಾಶ ಒಳಗೊಂಡಂತೆ ಜಾಗತಿಕರಣದ ಉತ್ತರ-ದಕ್ಷಿಣ ಕಾರಿಡಾರ್ ಮತ್ತು ಚಾಬಹಾರ್ ಬಂದರಿನ ಅಭಿವೃದ್ಧಿ ಮೊದಲಾದ ಪ್ರಮುಖ ರಕ್ಷಣಾ ಮತ್ತು ಆರ್ಥಿಕ ಯೋಜನೆಗಳನ್ನು ಕೈಗೊಳ್ಳುವ ಭಾರತದ ಸಾಮರ್ಥ್ಯ ಹಿನ್ನಡೆ ಕಾಣುವಂತಾಗಿದೆ..
ಇರಾನ್ ಭಾರತಕ್ಕೆ ದೀರ್ಘಕಾಲದ ಮಿತ್ರ ರಾಷ್ಟ್ರವಾಗಿದ್ದು, ಅದರ ಜೊತೆಗೆ ನಮಗೆ ಆಳವಾದ ನಾಗರಿಕ ಸಂಬಂಧಗಳಿವೆ. ಜಮ್ಮು ಮತ್ತು ಕಾಶ್ಮೀರದ ವಿಚಾರವಾಗಿ ಉದ್ಭವಗೊಂಡ ಸಂದಿಗ್ಧ ಸಂದರ್ಭಗಳಲ್ಲಿ ಭಾರತದ ಪರ ಸ್ಥಿರ ಬೆಂಬಲ ನೀಡಿದ ಇತಿಹಾಸವನ್ನು ಇರಾನ್ ಹೊಂದಿದೆ. 1994ರಲ್ಲಿ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗವು ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ಧ ನಿರ್ಬಂಧ ಹೇರುವ ಪ್ರಯತ್ನಕ್ಕೆ ತಡೆಯೊಡ್ಡಲು ನಮಗೆ ಸಹಾಯವಾಗಿ ನಿಂತಿದ್ದು ಇರಾನ್ ಎನ್ನುವುದು ಕೂಡಾ ಸತ್ಯ.
ವಾಸ್ತವವಾಗಿ, ಇರಾನ್ ನಲ್ಲಿ ಇಸ್ಲಾಮಿಕ್ ಆಡಳಿತದ ಪೂರ್ವದಲ್ಲಿದ್ದ ಸಾಮ್ರಾಜ್ಯಶಾಹಿ ಆಡಳಿತವು 1965 ಮತ್ತು 1971ರ ಭಾರತ – ಪಾಕಿಸ್ತಾನ್ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ಪರ ನಿಂತಿದ್ದ ಇತಿಹಾಸ ಹೊಂದಿತ್ತು. ಆದರೆ ನಂತರದ ಇಸ್ಲಾಮಿಕ್ ಆಡಳಿತದ ಕಾಲದಲ್ಲಿ ಭಾರತದ ಜೊತೆಗಿನ ಸಹಕಾರ ಸಂಬಂಧವು ಉತ್ತಮವಾಗಿತ್ತು.
ಇತ್ತೀಚಿನ ದಶಕಗಳಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ರಕ್ಷಣಾಕೇತ್ರಕ್ಕೆ ಸಂಬಂಧಿಸಿದ ಸಂಬಂಧ ಬೆಳೆಯುತ್ತಿದೆ. ಈ ವಿಶಿಷ್ಟವಾದ ಸಂಬಂಧ ನಮ್ಮ ದೇಶಕ್ಕೆ ಶಾಂತಿ ಸ್ಥಾಪನೆಯ ಮಧ್ಯಸ್ಥಿಕೆ ವಹಿಸಲು ನೈತಿಕ ಹೊಣೆ ಮತ್ತು ಹೆಚ್ಚಿನ ರಾಜತಾಂತ್ರಿಕ ಪ್ರಭಾವವನ್ನು ನೀಡುತ್ತದೆ. ಇದು ಕೇವಲ ಅಮೂರ್ತವಾದ ಸೈದ್ಧಾಂತಿಕ ವಿಚಾರವಲ್ಲ, ಪಶ್ಚಿಮ ಏಷ್ಯಾದಲ್ಲಿ ನೆಲೆಸಿರುವ ಮತ್ತು ಉದ್ಯೋಗದಲ್ಲಿರುವ ಲಕ್ಷಾಂತರ ಭಾರತೀಯರ ಹಿತದೃಷ್ಟಿಯಿಂದಲೂ ಈ ಶಾಂತಿ ಪ್ರಯತ್ನ ನಮ್ಮ ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ವಿಷಯವಾಗಬೇಕಾಗಿದೆ.
ಪಶ್ಚಿಮದ ಬಲಿಷ್ಠ ದೇಶಗಳ ಬೇಷರತ್ ಬೆಂಬಲದ ಬಲ ಪಡೆದು, ಇಸ್ರೇಲ್ ಇತ್ತೀಚೆಗೆ ನಿರ್ಭೀತಿಯ ವಾತಾವರಣದಲ್ಲಿ ಇರಾನ್ ವಿರುದ್ದ ಕ್ರಮಕ್ಕೆ ಮುಂದಾಗಿದೆ. 2023ರ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ಭಯಾನಕ ಮತ್ತು ಅಮಾನವೀಯ ದಾಳಿಗಳನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತೀವ್ರವಾಗಿ ಖಂಡಿಸಿದೆ, ಇದೇ ರೀತಿ ಇಸ್ರೇಲ್‌ನ ವಿನಾಶಕಾರಿ ಮತ್ತು ಅತಿರೇಕದ ಪ್ರತಿಕ್ರಿಯೆಯನ್ನು ಕೂಡ ಖಂಡಿಸದೆ ಇರಲು ಸಾಧ್ಯವಿಲ್ಲ. ಇತ್ತೀಚಿನ ಸಂಘರ್ಷದಲ್ಲಿ 55,000ಕ್ಕೂ ಹೆಚ್ಚು ಪ್ಯಾಲಿಸ್ತೀನಿಯರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಕುಟುಂಬಗಳು, ಹಳ್ಳಿಗಳು, ಹಾಗೂ ಆಸ್ಪತ್ರೆಗಳೂ ನಾಶವಾಗಿವೆ. ಗಾಜಾ ವಿನಾಶದ ಅಂಚಿನಲ್ಲಿದೆ ಮತ್ತು ಅಲ್ಲಿನ ನಾಗರಿಕರು ಅಸಹನೀಯ ಕಷ್ಟವನ್ನು ಅನುಭವಿಸುತ್ತಿದ್ದಾರೆ.
*ಭಾರತದ ಗೊಂದಲದ ನಡೆ:*
ದ್ವಿರಾಷ್ಟ್ರ ಶಾಂತಿ ಸಿದ್ಧಾಂತದ ಪ್ರಕಾರ ಸ್ವತಂತ್ರ, ಸಾರ್ವಭೌಮತೆ ಹೊಂದಿರುವ ಪ್ಯಾಲಿಸ್ತೀನ್ – ಇಸ್ರೇಲ್ ರಾಷ್ಟ್ರಗಳಲ್ಲಿ ಪರಸ್ಪರ ಸುರಕ್ಷತೆ ಮತ್ತು ಘನತೆಯಿಂದ ಬದುಕುವ ಸ್ಥಿತಿ ಇರಬೇಕಾಗುತ್ತದೆ. ಆದರೆ ಭಾರತ ದೀರ್ಘಕಾಲದಿಂದ ಅನುಸರಿಸುತ್ತ ಬಂದಿರುವ ಈ ದ್ವಿರಾಷ್ಟ್ರಗಳ ಶಾಂತಿ ಸಿದ್ಧಾಂತವನ್ನು ಈಗಿನ ಅಮಾನವೀಯವಾದ ಘೋರ ದುರಂತದ ಕ್ಷಣದಲ್ಲಿ ನರೇಂದ್ರ ಮೋದಿಯವರ ಸರ್ಕಾರವು ಹಿಂದಿನಂತೆ ಅನುಸರಿಸುತ್ತಿಲ್ಲ ಎನ್ನುವುದು ದುರದೃಷ್ಟಕರ.
ಗಾಜಾದ ವಿನಾಶ ಮತ್ತು ಸದ್ಯದ ಇರಾನ್ ವಿರುದ್ಧದ ಅಪ್ರಚೋದಿತ ದಾಳಿಯ ಕುರಿತು ಕೇಂದ್ರ ಸರ್ಕಾರದ ಮೌನವು ಭಾರತದ ನೈತಿಕ ಮತ್ತು ರಾಜತಾಂತ್ರಿಕ ಪರಂಪರೆಯಲ್ಲಿ ಉಂಟಾದ ಮಹತ್ವದ ಬದಲಾವಣೆಯನ್ನು ಪ್ರತಿಬಿಂಬಿಸುತ್ತದೆ. ಇದು ಕೇವಲ ನಮ್ಮ ಅಭಿಪ್ರಾಯದ ಸೋಲು ಮಾತ್ರವಲ್ಲ, ನಮ್ಮ ಮೌಲ್ಯಗಳ ಶರಣಾಗತಿಯಾಗಿದೆ.
ಇನ್ನೂ ಕಾಲ ಮಿಂಚಿಹೋಗಿಲ್ಲ. ಈಗಲಾದರೂ ಭಾರತ ಸ್ಪಷ್ಟವಾಗಿ ಮತ್ತು ಜವಾಬ್ದಾರಿಯುತವಾಗಿ ವರ್ತಿಸಿ, ಸಾಧ್ಯ ಇರುವ ಎಲ್ಲಾ ರಾಜತಾಂತ್ರಿಕ ಮಾರ್ಗಗಳನ್ನು ಬಳಸಿಕೊಂಡು ಪಶ್ಚಿಮ ಏಷ್ಯಾದಲ್ಲಿ ಉದ್ಭವಿಸಿರುವ ಉದ್ವಿಗ್ನ ಪರಿಸ್ಥಿತಿಯನ್ನು ಶಮನಗೊಳಿಸಲು ಹಾಗೂ ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು.
ಕನ್ನಡಕ್ಕೆ: ವಿನಾಯಕ್ ಭಟ್