ದೊಡ್ಡಬಳ್ಳಾಪುರ: ಪ್ರಧಾನಮಂತ್ರಿ ನರೇಂದ್ರಮೋದಿ ಅವರ ನೇತೃತ್ವದಲ್ಲಿನ 11 ವರ್ಷಗಳ ಆಡಳಿತ ಸಾಧನೆಯನ್ನು ವಿಶ್ವದ ಅನೇಕ ರಾಷ್ಟ್ರಗಳು ಶ್ಲಾಘೀಸಿವೆ ಎಂದು ಬಿಜೆಪಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ರಾಮಕೃಷ್ಣಪ್ಪ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ 11 ವರ್ಷಗಳ ಆಡಳಿತ ಸಾಧನೆ ಕುರಿತು ಮಾಹಿತಿ ನೀಡಿದ ಅವರು, ಭಾರತವು ಜಾಗತೀಕವಾಗಿ 4ನೇ ಆರ್ಥಿಕ ಶಕ್ತಿಯಾಗಿ ರೂಪುಗೊಂಡಿದೆ. ಹೊರಗಿನ ಶಕ್ತಿಗಳು ನಡೆಸಿದ ಭಯೋತ್ಪಾದನ ಕೃತ್ಯಕ್ಕೆ ಸರ್ಜಿಕಲ್ ಸ್ಟ್ರೈಕ್, ಅಪರೇಷನ್ ಸಿಂಧೂರ ಮೂಲಕ ತಕ್ಕ ಉತ್ತರ ನೀಡಿ ಭಾರತದಲ್ಲಿ ಉಗ್ರವಾದಕ್ಕೆ ಅವಕಾಶ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಬಿಜೆಪಿಯ ಅಖಂಡ ಭಾರತ ಸಂಕಲ್ಪದ ಕನಸುನನಸು ಮಾಡುವ ದಿನಗಳು ಸಮೀಸುವಂತೆ ಮಾಡಿದ್ದಾರೆ. ದೇಶದ ಗಡಿಯಲ್ಲಿ ಭಾರತ ಮಾಲ ಯೋಜನೆಯಲ್ಲಿ ರಸ್ತೆಗಳ ನಿರ್ಮಾಣ ಮಾಡಿರುವುದು ನೆರೆಯ ದೇಶಗಳ ಗಡಿ ಅತಿಕ್ರಮದಂತಹ ದುಸ್ಸಾಹಸಕ್ಕೆ ಕಡಿವಾಣ ಬಿದ್ದಿದೆ ಎಂದರು.
ಬಡವರ ಮನೆಗಳು ಸಹ ಹೊಗೆ ಮುಕ್ತವಾಗಿರಬೇಕು, ಮಹಿಳೆಯರ ಆರೋಗ್ಯ ಸುಧಾರಿಸಬೇಕು ಎನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಉಜ್ವಲ ಯೋಜನೆ ಮೂಲಕ ಪ್ರತಿ ಮನೆಗು ಅಡುಗೆ ಅನಿಲ ಸಂಪರ್ಕ ದೊರೆಯುವಂತೆ ಮಾಡಿದ್ದಾರೆ. ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರು ಬ್ಯಾಂಕ್ ಗಳಲ್ಲಿ ಖಾತೆಗಳನ್ನು ಹೊಂದಿರುವಂತೆ ಮಾಡಲು ಜನ್ ಧನ್ ಜಾರಿಗೆ ತಂದಿದ್ದರಿಂದ ಆರ್ಥಿಕ ಪ್ರಗತಿಯು ವೇಗ ಪಡೆದಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ವಕ್ತಾರರಾದ ಪುಷ್ಪಾಶಿವಶಂಕರ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 11 ವರ್ಷಗಳ ಆಡಳಿತ ಸಾಧನೆಯನ್ನು ಬೂತ್ ಹಂತದಿಂದ ಮನೆ ಮನೆಗು ತಲುಪಿಸಲು ಅಭಿಯಾನ ನಡೆಸಲಾಗುತ್ತಿದೆ. ದೇಶದ ಬ್ಯಾಂಕುಗಳು ಸೇರಿದಂತೆ ದಿನ ನಿತ್ಯದ ಹಣಕಾಸು ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿದ್ದರಿಂದ ಮಹಿಳೆಯರು, ಬಡವರಿಗೆ ಅನುಕೂಲವಾಗಿದೆ. ಇದರಿಂದ ದೇಶದ ಆರ್ಥಿಕತೆಯಲ್ಲಿ ಯಾವುದೇ ಅಕ್ರಮ ವಹಿವಾಟುಗಳು ನಡೆಯುವುದನ್ನು ತಡೆಯಲು ಸಾಧ್ಯವಾಗಿದೆ. ಜಿಎಸ್ಟಿ ಜಾರಿಯಿಂದ ದೇಶದ ತೆರಿಗೆಯಲ್ಲಿನ ವಂಚನೆ ತಪ್ಪಿದೆ. ಇದರಿಂದ ದೇಶದ ಅಭಿವೃದ್ಧಿಗೆ ವೇಗ ದೊರೆಯಲು ಸಾಧ್ಯವಾಗಿದೆ ಎಂದು ಹೇಳಿದರು.
ಗರಿಷ್ಣ ಮುಖ ಬೆಲೆಯ ನೋಟ್ಗಳನ್ನು ರದ್ದುಗೊಳಿಸಿದ್ದರಿಂದ ನೆರೆಯ ಪಾಕಿಸ್ತಾನದಿಂದ ಬರುತ್ತಿದ್ದ ನಕಲಿ ನೋಟ್ಗಳ ಹಾವಳಿ ರದ್ದಾಗಿದೆ. ಇದರಿಂದಾಗಿಯೇ ಇಂದು ಪಾಕಿಸ್ತಾನವು ಆರ್ಥಿಕವಾಗಿ ದೀವಾಳಿ ಅಂಚಿಗೆ ಬಂದಿದೆ. ಇದಲ್ಲದೆ ದಿನ ನಿತ್ಯ ಬಳಸುವ ಗೋದಿ ಹಿಟ್ಟನ್ನು ಸಹ ಅಲ್ಲಿನ ಸಾಮಾನ್ಯ ಜನ ಖರೀದಿಸುವುದು ಕಷ್ಟದ ಸ್ಥಿತಿಗೆ ಬಂದು ನಿಂತಿದೆ. ಮಹಿಳೆಯರಿಗೆ ರಾಜಕೀಯ ಅಧಿಕಾರ ಲೋಕಸಭೆಯಿಂದ ಎಲ್ಲಾ ಹಂತದಲ್ಲೂ ದೊರೆಯುವಂತೆ ಮಾಡುವ ಉದ್ದೆಶದಿಂದಲೇ ಕಾಯ್ದೆ ಜಾರಿಗೆ ತರಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ,ತಾಲ್ಲೂಕು ಘಟಕದ ಅಧ್ಯಕ್ಷ ನಾಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ನಾರಾಯಣಸ್ವಾಮಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬೃಂಗೇಶ್,ನೆಲಮಂಗಲ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದರಿ, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ಅಂಬರೀಶ್ ಗೌಡ, ಮಂಜುನಾಥ್ ಇದ್ದರು.