ಭಾರತದ ಬೌಲಿಂಗ್ ದಾಳಿಗೆ ಬೆದರಿದ ಕಿವೀಸ್! ರೋಹಿತ್ ಪಡೆಗೆ ಸರಣಿ ಜಯ

ರಾಯಪುರ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತೀಯ ಬೌಲಿಂಗ್ ದಾಳಿಗೆ ಬೆದರಿದ ಪ್ರವಾಸಿ ನ್ಯೂಜಿಲೆಂಡ್ ತಂಡ 34.3 ಓವರುಗಳಲ್ಲಿ 108 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಗಂಟು-ಮೂಟೆ ಕಟ್ಟುವ ಮೂಲಕ ಭಾರತಕ್ಕೆ ಸುಲಭ ಗುರಿ ನೀಡಿತು.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ನಾಯಕ ರೋಹಿತ್ ಶರ್ಮಾ ಅವರ ನಿರ್ಧಾರ ಸರಿಯಾಗಿದೆ ಎಂದು ತೋರಿಸಿಕೊಟ್ಟ ಬೌಲಿಂಗ್ ವಿಭಾಗ ಪ್ರವಾಸಿ ತಂಡಕ್ಕೆ ಖಾತೆ ತೆರೆಯುವ ಮೊದಲೇ ಮೊದಲ ಓವರ್ ನಲ್ಲಿಯೇ ಆಘಾತ ನೀಡಿತು, ಹೊಸ ಬಾಲ್ ನಲ್ಲಿ ಮೊದಲ ಓವರ್ ಮಾಡಿದ ಅನುಭವಿ ಬೌಲರ್ ಮಹಮ್ಮದ್ ಶಮಿ ಇನ್ನಿಂಗ್ಸ್ ನ ಐದನೇ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಫಿನ್ ಅಲೆನ್ ವಿಕೆಟ್ ಪಡೆಯುವ ಮೂಲಕ ಪೆವಿಲಿಯನ್ ಗೆ ಕಳಿಸಿದರು.

ತಂಡದ ಮೊತ್ತ 8 ರನ್ ಗಳಿಸಿದ ಸಂದರ್ಭದಲ್ಲಿ ಹೆನ್ರಿ ನಿಕೋಲ್ಸ್ ಸಿರಾಜ್ ಎಸೆದ ಬಾಲ್ ಕೆಣಕಿ ಸ್ಲಿಪ್ ನಲ್ಲಿದ್ದ ಶುಭಮನ್ ಗಿಲ್ ಗೆ ಕ್ಯಾಚ್ ನೀಡಿದರು, ನಂತರ ಬಂದ ನಾಯಕ ಟಾಮ್ ಲ್ಯಾಥಮ್ ಹಾಗೂ ಮಿಚೆಲ್ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ಕಾನ್ವೆ ವಿಕೆಟ್ ಒಪ್ಪಿಸಿದರು.

15 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡಕ್ಕೆ ಆಸರೆಯಾದವರು ಗ್ಲೇನ್ ಫಿಲಿಪ್ಸ್ (36), ಬ್ರೆಸ್ವೆಲ್ (22) ಹಾಗೂ ಮಿಚೆಲ್ ಸ್ಯಾಂಟ್ನರ್ (27) ರನ್ ಗಳಿಸಿ ನೂರು ರನ್‌ಗಳ ಗಡಿ ದಾಟಿಸಿದರು, ಈ ಮೂವರನ್ನು ಬಿಟ್ಟು ಬೇರೆ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ದಾಟಲಿಲ್ಲ.

ಭಾರತದ ಪರವಾಗಿ ಮಿಂಚಿದ ಅನುಭವಿ ಬೌಲರ್ ಮಹಮ್ಮದ್ ಶಮಿ ಮೂರು ವಿಕೆಟ್, ಹಾರ್ದಿಕ್ ಪಾಂಡ್ಯ ಹಾಗೂ ವಾಶಿಂಗ್ಟನ್ ಸುಂದರ್ ತಲಾ ಎರಡು ವಿಕೆಟ್ ಮತ್ತು ಸಿರಾಜ್, ಕುಲದೀಪ್ ಯಾದವ್ ಹಾಗೂ ಶಾದು೯ಲ್ ಠಾಕೂರ್ ತಲಾ ಒಂದು ವಿಕೆಟ್ ಪಡೆದುಕೊಂಡರು.

ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಜೋಡಿ ಉತ್ತಮ ರನ್ ಪೇರಿಸಿತು, ನಾಯಕ ರೋಹಿತ್ ಶರ್ಮಾ (51) ಹಾಗೂ ಆರಂಭಿಕ ಆಟಗಾರ ಶುಭ್ ಮನ್ ಗಿಲ್ ಔಟಾಗದೆ (40) ರನ್ ಗಳಿಸುವ ಮೂಲಕ ಜಯದ ಸನಿಹ ಕೊಂಡೊಯ್ದರು, ರೋಹಿತ್ ಔಟಾದ ನಂತರ ಕ್ರಿಸ್ ಗೆ ಬಂದ ಹಿರಿಯ ಆಟಗಾರ ಸ್ಪಿನ್ನರ್ ಸ್ಯಾಂಟ್ನರ್ ಗೆ ವಿರಾಟ್ ಒಪ್ಪಿಸಿದರು.

ಕೊನೆಯಲ್ಲಿ ಬಡ್ತಿ ಪಡೆದು ಕ್ರಿಸ್ ಗೆ ಬಂದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (11) ರನ್ ಗಳಿಸುವ ಮೂಲಕ ಜಯ ತಂದುಕೊಟ್ಟರು, ಇನ್ನೂ ಒಂದು ಪಂದ್ಯ ಇರುವಾಗಲೇ ಭಾರತ ತಂಡ ಸರಣಿ ವಶಪಡಿಸಿಕೊಂಡಿತು. ಉತ್ತಮ ಬೌಲಿಂಗ್ ಮಾಡಿದ ಅನುಭವಿ ಬೌಲರ್ ಮಹಮ್ಮದ್ ಶಮಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

Leave a Reply

Your email address will not be published. Required fields are marked *