ಪ್ರಧಾನಿ ಮೋದಿಯವರೇ ಕರ್ನಾಟಕ ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಗ್ಯಾರಂಟಿ ಜಾರಿಯಾದರೆ ರಾಜ್ಯ ಸರ್ಕಾರ ದಿವಾಳಿಯಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಸುಳ್ಳಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯುವನಿಧಿ ಜತೆಗೆ ಉಚಿತ ತರಬೇತಿ, ಅರ್ಜಿ ಶುಲ್ಕವೂ ಉಚಿತ. ರಾಜ್ಯದ ಜನರಿಗೆ ಇದು ಮುಟ್ಟಿದೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀನಿ ಅಂದ ಮೋದಿಯವರೇ ನೀವು ಉದ್ಯೋಗ ಸೃಷ್ಟಿಸಿದ್ರಾ? ವರ್ಷಕ್ಕೆ ಎರಡು ಕೋಟಿ ಉದ್ಯೋಗ ಅಂದ್ರೆ ಇಷ್ಟೊತ್ತಿಗೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಎಲ್ಲಿ ಸೃಷ್ಟಿಯಾಯ್ತು ಮೋದಿಯವರೇ? ನೀವು ಮಾತಿಗೆ ತಪ್ಪಿದ ಮೋದಿ ಆಗಿದ್ದೀರಿ ಎಂದು ಕಿಡಿಕಾರಿದರು.
ಭಾರತದ ಇತಿಹಾಸದಲ್ಲಿ ಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಇವತ್ತಿನವರೆಗೂ ಬಂದಿಲ್ಲ. ಮೋದಿಯವರೇನು ಆರ್ಥಿಕ ತಜ್ಞರಾ? ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಭಾಷಣ ಮಾಡಿದ್ರು. ಈಗ ಐದೂ ಯೋಜನೆ ಜಾರಿಯಾಗಿ ರಾಜ್ಯ ಆರ್ಥಿಕವಾಗಿ ಸದೃಢವಾಗಿದೆ ಎಂದರು.
ವಿವೇಕಾನಂದ ಜಯಂತಿಯಂದು ಲಕ್ಷಾಂತರ ಯುವಕ ಯುವತಿಯರ ಸಮ್ಮುಖದಲ್ಲಿ ಯುವನಿಧಿಯನ್ನು ನೇರವಾಗಿ ಅರ್ಹರ ಖಾತೆಗೆ ಜಮೆ ಮಾಡುವ ಕಾರ್ಯಕ್ರಮ ನಡೆಸುತ್ತೇವೆ. ರಾಜ್ಯದಲ್ಲಿ ಖಾಲಿ ಇರುವ ಉದ್ಯೋಗಗಳನ್ನೂ ಭರ್ತಿ ಮಾಡಲಾಗುವುದು. ಮಾತು ತಪ್ಪಿದ ಮೋದಿಯವರೇ ನಿಮ್ಮ ಮಾತು ಏನಾಯ್ತು? ರಾಜ್ಯದ ಯುವ ಸಮೂಹ ನಿಮ್ಮನ್ನು ಪ್ರಶ್ನಿಸುತ್ತಿದೆ ಎಂದು ಹೇಳಿದರು.