ಕರ್ನಾಟಕ ಪೊಲೀಸ್ ಇಲಾಖೆಯ ಮುಖ್ಯ ಪೇದೆ ಮತ್ತು ಪೇದೆಗಳು ಹಲವು ವರ್ಷಗಳಿಂದ ಬ್ರಿಟಿಷ್ ಕಾಲದ ವೃತ್ತಾಕಾರದ ದೊಡ್ಡ ಟೋಪಿ ಧರಿಸುತ್ತಿದ್ದಾರೆ. ಇದು ಆರೋಗ್ಯ ಮತ್ತು ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಈ ಹಿನ್ನೆಲೆ ಹೊಸ ಪೀಕ್ ಟೋಪಿಗಳನ್ನು ನೀಡಲು ಪೊಲೀಸ್ ಇಲಾಖೆ ಚಿಂತಿಸುತ್ತಿದೆ. ಈ ಕುರಿತು ಇದೇ ಏಪ್ರಿಲ್ 4ರಂದು ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ಬ್ರಿಟಿಷ್ ಕಾಲದ ಟೋಪಿಗಳನ್ನು ಬದಲಿಸುವ ಕೂಗು ಬಹಳ ಹಿಂದಿನಿಂದಲೂ ಕೇಳಿಬರುತ್ತಿತ್ತು. ಇದು ಪೊಲೀಸರ ಬಹುವರ್ಷಗಳ ಬೇಡಿಕೆ ಕೂಡ ಆಗಿತ್ತು. ಇದೀಗ ಅದಕ್ಕೆ ಸಮಯ ಬಂದಿದ್ದು, ದೊಡ್ಡ ಟೋಪಿ ಬದಲಾಗಿ ಸ್ಮಾರ್ಟ್ ಪೀಕ್ ಹ್ಯಾಟ್ ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ ಸ್ಟೆಬಲ್ಗಳ ತಲೆಯನ್ನು ಅಲಂಕರಿಸಲಿದೆ. ಇಂತಹದೊಂದು ಸಾಹಸಕ್ಕೆ ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ.
ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಅಲ್ಲಿನ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ ಸ್ಟೆಬಲ್ಗಳಿಗೆ ಪೀಕ್ ಕ್ಯಾಪ್ಗಳನ್ನು ನೀಡಲಾಗಿದೆ.
ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪೀಕ್ ಟೋಪಿಗಳನ್ನು ಕೊಡುವ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ಆದೇಶಿಸಿದ್ದಾರೆ. ಹೀಗಾಗಿ ಪೀಕ್ ಟೋಪಿ ವಿತರಣೆ ಕುರಿತು ಚರ್ಚಿಸಲು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ಸಾರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಏ.4ಕ್ಕೆ ಕಿಟ್ ನಿರ್ದಿಷ್ಟತಾ ಸಮಿತಿ ಸಭೆಯನ್ನು ಕರೆಯಲಾಗಿದೆ ಎಂದು ತಿಳಿದುಬಂದಿದೆ.