ಬ್ಯಾಂಕ್ ಹೆಸರಲ್ಲಿ ಫೋನ್‌ ಕರೆ; OTP ಪಡೆದು ಎರಡು ಬ್ಯಾಂಕ್​​ ಖಾತೆಗಳಿಂದ 58 ಸಾವಿರ ರೂ. ವಂಚನೆ

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್​ಬಿಐ) ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೋರ್ವ ಕ್ರೆಡಿಟ್ ಕಾರ್ಡ್ ಸಾಲದ ಮಿತಿ ಹೆಚ್ಚಿಸುವುದಾಗಿ ಹೇಳಿ ವ್ಯಕ್ತಿಯೊಬ್ಬರ ಎರಡು ಬ್ಯಾಂಕ್​​ ಖಾತೆಗಳಿಂದ 58 ಸಾವಿರ ರೂ. ಎಗರಿಸಿರುವ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ನಗರದ ಬಸವೇಶ್ವರನಗರದ ನಿವಾಸಿಯಾದ ರಾಕೇಶ್‌ಗೆ ಡಿ.5ರಂದು ಫೋನ್​ ಕರೆ ಬಂದಿತ್ತು. ಎಸ್​ಬಿಐ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ, ಕ್ರೆಡಿಟ್ ಕಾರ್ಡ್‌ನ ಸಾಲದ ಮೊತ್ತದ ಮಿತಿ ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದಾನೆ. ಎಸ್​ಬಿಐ ಬ್ಯಾಂಕ್‌ನವರೇ ಫೋನ್ ಮಾಡಿದ್ದಾರೆ ಎಂದು ನಂಬಿದ ರಾಕೇಶ್, ಕರೆ ಮಾಡಿದ ವ್ಯಕ್ತಿಗೆ ಆಧಾರ್ ಕಾರ್ಡ್, ಖಾತೆಯ ಮಾಹಿತಿಯೊಂದಿಗೆ ಒಟಿಪಿ ನಂಬರ್ ಕೂಡಾ ಕೊಟ್ಟಿದ್ದಾರೆ. ಇದಾದ ಬಳಿಕ ಇವರ ಎಸ್​ಬಿಐ ಖಾತೆಯಲ್ಲಿದ್ದ 32 ಸಾವಿರ ರೂಪಾಯಿ ಮಾಯವಾಗಿದೆ.

ಖಾತೆಯಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದೆ ಎಂದು ಹೇಳಿ ರಾಕೇಶ್ ಪತ್ನಿಯ ಬ್ಯಾಂಕ್ ಆಫ್ ಬರೋಡಾ ಖಾತೆಯ ಮಾಹಿತಿಯನ್ನೂ ಪಡೆದ ವಂಚಕ, ಖಾತೆಯಲ್ಲಿದ್ದ 26 ಸಾವಿರ ರೂಪಾಯಿ ಎಗರಿಸಿದ್ದಾನೆ. ಹೀಗೆ ತಮ್ಮ ಎರಡೂ ಬ್ಯಾಂಕ್​ ಖಾತೆಯಲ್ಲಿ ಹಣ ಖಾಲಿಯಾದ ಕೂಡಲೇ ಬ್ಯಾಂಕ್‌ಗೆ ಹೋಗಿ ವಿಚಾರಿಸಿದ್ದಾರೆ. ಬ್ಯಾಂಕ್‌ನಲ್ಲಿ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರಾಕೇಶ್​​ ಬೆಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಜಗತ್ತು ಡಿಜಿಟಲ್​ ಆಗಿ ಪರಿವರ್ತೆಯಾದ ನಂತರ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ. ಯುಪಿಐ ಪಿನ್ ಹಾಗೂ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಎಂದು ಬ್ಯಾಂಕ್​ಗಳು ಸಂದೇಶ ರವಾನಿಸುತ್ತಲೇ ಇವೆ. ಇವುಗಳ ಕಡೆ ಗಮನಹರಿಸಿ.

Leave a Reply

Your email address will not be published. Required fields are marked *