ಬೌದ್ಧ ನೆಲೆಯಾದ ರಾಜಘಟ್ಟದ ಬೂದಿಗುಂಡಿ ಉತ್ಖನನಕ್ಕೆ ಚಾಲನೆ

ರಾಜ್ಯದ ಐತಿಹಾಸಿಕ ಬೌದ್ಧ ನೆಲೆಯಾದ ರಾಜಘಟ್ಟದ ಬೂದಿಗುಂಡಿ ಉತ್ಖನನಕ್ಕೆ ಇಂದು ಕಾನೂನು ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯಹಾರಗಳು ಮತ್ತು ಪ್ರವಾಸೋದ್ಯಮ ಸಚಿವರಾದ ಡಾ.ಎಚ್.ಕೆ ಪಾಟೀಲ್ ಅವರು ಚಾಲನೆ ನೀಡಿದರು.

ರಾಜಘಟ್ಟ ಗ್ರಾಮದಲ್ಲಿ ಸುಮಾರು 1500 ವರ್ಷಗಳ ಹಿಂದೆ ಪ್ರಾಚೀನ ಮಹಾಯಾನ ಬೌದ್ಧ ವಿಹಾರ ಮತ್ತು ಚೈತ್ಯದ ಅವಶೇಷಗಳು ಪತ್ತೆಯಾಗಿದ್ದು, ಇದು ರಾಜ್ಯದಲ್ಲಿ ಮಹಾಯಾನ ಬೌದ್ಧಧರ್ಮಕ್ಕೆ ಸಂಬಂಧಿಸಿದ ರಚನೆಗಳ ಮೊದಲ ಪುರಾತತ್ತ್ವ ಶಾಸ್ತ್ರದ ಆವಿಷ್ಕಾರವಾಗಿದೆ.

ಈ ಸ್ಥಳವನ್ನು 2001 ಮತ್ತು 2004 ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಪುರಾತತ್ವ ವಿಭಾಗದ ಪ್ರೊ. ಎಂ.ಎಸ್. ಕೃಷ್ಣಮೂರ್ತಿ (ನಿವೃತ್ತ) ಕಂಡುಹಿಡಿದು ಉತ್ಖನನ ಮಾಡಿದರು. ಆದರೆ, ಈ ಉತ್ಖನನ ಪರಿಪೂರ್ಣವಾಗಿರಲಿಲ್ಲ ಎನ್ನಲಾಗಿದೆ.

ತಮಿಳುನಾಡಿನ ಪ್ರಮುಖ ಕಲಿಕಾ ಕೇಂದ್ರವಾದ ಕಾಂಚಿ ಮತ್ತು ಕೇರಳದ ಶ್ರೀಮೂಲವಾಸಂ ಸೇರಿದಂತೆ ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಪ್ರಾಚೀನ ಮಹಾಯಾನ ಬೌದ್ಧ ಮಠಗಳ ಬಗ್ಗೆ ವರದಿಗಳಿವೆ. ಆದಾಗ್ಯೂ, ಆಂಧ್ರಪ್ರದೇಶ, ತೆಲಂಗಾಣದ ನಾಗಾರ್ಜುನಕೊಂಡದ ದಕ್ಷಿಣಕ್ಕೆ ಎಲ್ಲಿಯೂ ಮಹಾಯಾನ ಬೌದ್ಧ ವಿಹಾರಗಳು ಮತ್ತು ಅವಶೇಷಗಳ ಬಗ್ಗೆ ರಚನಾತ್ಮಕ ಉತ್ಖನನ ನಡೆದಿಲ್ಲ. ಹಾಗಾಗಿ ರಾಜಘಟ್ಟದಲ್ಲಿನ ಚೈತ್ಯದ ಅವಶೇಷಗಳ ಆವಿಷ್ಕಾರವು ಹೆಚ್ಚಿನ ಮಹತ್ವದ್ದಾಗಿದೆ.

ಇದು ಬೆಂಗಳೂರಿನಲ್ಲಿ ಮಹಾಯಾನ ಬೌದ್ಧಧರ್ಮದ ಉಪಸ್ಥಿತಿಯ ಮೇಲೆ ಬೆಳಕು ಚೆಲ್ಲುವುದಲ್ಲದೆ, ಕರ್ನಾಟಕ ಮತ್ತು ದಕ್ಷಿಣ ಭಾರತದ ಉಳಿದ ಭಾಗಗಳಲ್ಲಿ ಮೊದಲ ಸಹಸ್ರಮಾನದ ಅವಧಿಯಲ್ಲಿ ಬೌದ್ಧ ಪದ್ಧತಿಗಳು ಮತ್ತು ಜೀವನದ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಒದಗಿಸುತ್ತದೆ.

ರಾಜಘಟ್ಟ ಎಂಬುದು ದೆಹಲಿಯ ರಾಜ್‌ ಘಾಟ್ ನಿಂದ ವಲಸೆ ಬಂದ ಬೌದ್ಧರ ನೆಲೆಯಾಗಿತ್ತು ಎಂಬುದು ಬೌದ್ಧ ಅನುಯಾಯಿಗಳ ವಾದವಾಗಿದೆ. ರಾಜಘಟ್ಟ ಗ್ರಾಮವು 2ನೇ ಶತಮಾನದಿಂದ 7ನೇ ಶತಮಾನದವರೆಗೆ ಬೌದ್ಧ ವಸಾಹತು ಪ್ರದೇಶವಾದ್ದು, ಬೌದ್ಧರ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು ಎಂಬ ಮಾತುಗಳು ಕೇಳಿಬಂದಿವೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಗ್ರಾಮವು ಕ್ರಿಸ್ತ ಪೂರ್ವದಲ್ಲಿ ಬೌದ್ಧರ ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಈ ಗ್ರಾಮದ ಸುಮಾರು 40 ಎಕರೆಗೂ ಹೆಚ್ಚು ವಿಸ್ತೀರ್ಣದಲ್ಲಿ ಬೌದ್ಧ ಪಳೆಯುಳಿಕೆಗಳು ಹುದುಗಿವೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!