ಕುಶಾಲನಗರ ಸಮೀಪದ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ “ಹನಿ ಟ್ರ್ಯಾಪ್” ಪ್ರಕಾರಣಕ್ಕೆ ಸಂಬಂಧಿಸಿದಂತೆ ತಲೆಮಾರೆಸಿಕೊಂಡಿದ್ದ ಕೊಡಗಿನ ಯುವಕ ಸೇರಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಡಗು ಜಿಲ್ಲೆಯ ನಾಪೋಕ್ಲು ಕುಂಜಿಲ ನಿವಾಸಿ ಸೈಫ್ ಮತ್ತು ಮಂಡ್ಯ ಮೂಲದ ಯುವತಿ ಕವನ ಳನ್ನು ಬಂಧಿಸಲಾಗಿದೆ. ಕಳೆದ ಜೂನ್ ತಿಂಗಳಿನಲ್ಲಿ ಪಿರಿಯಾಪಟ್ಟಣದ ಕಂಪಲಾ ಪುರ ಬಟ್ಟೆ ಅಂಗಡಿ ಮಾಲೀಕ ಒಬ್ಬನನ್ನು ಹನಿ ಟ್ರ್ಯಾಪ್ ಮಾಡಿ ಲಕ್ಷಾಂತರ ಹಣ ವಸೂಲಿ ಮಾಡಿದ ನಂತರ ತಲೆಮಾರೆಸಿಕೊಂಡಿದ್ದ ಆರೋಪಿಗಳನ್ನು ಬೈಲು ಕುಪ್ಪೆ ಪೊಲೀಸ್ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಬ್ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಕೇರಳದ ಕಣ್ಣೂರು ಬಳಿ ಲಾಡ್ಜ್ ವೊಂದರಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಹುಣಸೂರು ಪೊಲೀಸ್ ಠಾಣೆಯ ಪೇದೆ ಶಿವಣ್ಣ ಮತ್ತು ಮೂರ್ತಿ ಎಂಬುವವರನ್ನು ಈ ಹಿಂದೆ ಬಂಧಿಸಲಾಗಿತ್ತು. ಪ್ರಕರಣದಲ್ಲಿ ಬಟ್ಟೆ ಅಂಗಡಿ ಮಾಲೀಕ ನಿಂದ 10 ಲಕ್ಷಕ್ಕೂ ಹೆಚ್ಚು ಹಣ ವಸೂಲಿ ಮಾಡಲಾಗಿತ್ತು. ಬಂಧಿತರನ್ನು ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.