ಬೈಕಿನ ಸೈಲೆನ್ಸರ್ ಮಾರ್ಪಡುಗೊಳಿಸಿ ಸಂಚಾರಿ ನಿಯಮ ಉಲ್ಲಂಘನೆ: ಸವಾರನಿಗೆ ಬಿತ್ತು ರೂ 25,500 ಫೈನ್

ಸವಾರನೊಬ್ಬ ಬೈಕ್ ನ ಸೈಲೆನ್ಸರನ್ನು ಮಾರ್ಪಡುಗೊಳಿಸಿರುವುದಕ್ಕೆ ಮತ್ತು ಸೈಡ್ ಮಿರರ್, ಹಿಂಬದಿ ಇಂಡಿಕೇಟರ್ ಮತ್ತು ಹೊಗೆ ತಪಾಸಣಾ ಪತ್ರ ಹೊಂದಿಲ್ಲದ ಕಾರಣ ಬರೋಬ್ಬರಿ 25,500/- ರೂ. ದಂಡ ತೆತ್ತಿದ್ದಾನೆ. ಮಡಿಕೇರಿ ಮಹದೇವಪೇಟೆಯ ಅಬ್ದುಲ್ ಫಹಿಮ್ (21) ಎಂಬಾತ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ಮತ್ತು ಸಿಬ್ಬಂದಿ ಬಲೆಗೆ ಬಿದ್ದು ಸಂಚಾರಿ ನಿಯಮ ಉಲ್ಲಂಘನೆಗಾಗಿ ದಂಡ ಕಟ್ಟಿದವನಾಗಿದ್ದಾನೆ.

ಡಿ.1ರಂದು ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಧರ್ ಮತ್ತು ಸಿಬ್ಬಂದಿ ಕಾಲೇಜು ರಸ್ತೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳನ್ನು ಪರಿಶೀಲಿಸುವ ಕರ್ತವ್ಯದಲ್ಲಿದ್ದ ಸಂದರ್ಭ ದ್ವಿಚಕ್ರ ವಾಹನವೊಂದು ಅತೀ ವೇಗ ಹಾಗೂ ಕರ್ಕಶ ಧ್ವನಿ ಉಂಟು ಮಾಡುತ್ತಾ ಬಂದಿದೆ. ಅದನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ KA 09 – V9114 ನೋಂದಣಿ ಸಂಖ್ಯೆಯ ಸುಜುಕಿ ಸಮುರಾಯಿ ಮೋಟಾರ್ ಸೈಕಲಿನ ಸೈಲೆನ್ಸರನ್ನು ಮಾರ್ಪಡುಗೊಳಿಸಿರುವುದು ಮತ್ತು ಸೈಡ್ ಮಿರರ್, ಹಿಂಬದಿಯ ಇಂಡಿಕೇಟರ್ ಹಾಗೂ ಹೊಗೆ ತಪಾಸಣಾ ಪತ್ರ ಇಲ್ಲದಿರುವುದು ಕಂಡುಬಂದಿದೆ.

ಅದರ ಸವಾರ ಮಡಿಕೇರಿ ಮಹದೇವಪೇಟೆಯ ಅಬ್ದುಲ್ ಫಹಿಮ್ (21) ಎಂಬಾತನ ವಿರುದ್ಧ ಮಡಿಕೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಲಂ 281 BNS & 189, 177 & 190(2), 115 CMV ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಿ ಒಟ್ಟು ರೂ. 25,500/- ದಂಡ ವಿಧಿಸಲಾಗಿದೆ.

*ದಂಡದ ವಿವರ*

1) ಅತೀ ವೇಗ ಮತ್ತು ಅಜಾಗರುಕತೆಯ ವಾಹನ ಚಾಲನೆಗೆ – ರೂ. 10,000/-

2) ಸೆನ್ಸರ್ ಮಾರ್ಪಡುಗೊಳಿಸಿರುವುದು ಮತ್ತು ಹೊಗೆ ತಪಾಸಾಣಾ ಪತ್ರ ಇಲ್ಲದಿರುವುದಕ್ಕೆ ರೂ. 10,000/-

3) ರೇಸಿಂಗ್ ಮತ್ತು ವೇಗದ ಪ್ರಯೋಗಕ್ಕೆ – ರೂ. 5,000/-

4) ಸೈಡ್ ಮಿರರ್ ಮತ್ತು ಹಿಂಬದಿಯ ಇಂಡಿಕೇಟರ್ ಇಲ್ಲದಿರುವುದಕ್ಕೆ ರೂ. 500/-
ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *