ರೇಷ್ಮೆ ಕೃಷಿಯು ರೈತರಿಗೆ ತ್ವರಿತ ಲಾಭ, ಹೆಚ್ಚಿನ ಉದ್ಯೋಗ ಸಾಮಾರ್ಥ್ಯ ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಕಡಿಮೆ ಅವಧಿ, ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ನೀಡುವ ಬೆಳೆ ರೇಷ್ಮೆ ಕೃಷಿಯಾಗಿದೆ. ಸಿಲ್ಕ್ ಮತ್ತು ಮಿಲ್ಕ್ ಎಂದು ಖ್ಯಾತಿ ಪಡೆದಿರುವ ರೇಷ್ಮೆ ಕೃಷಿ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 6289.72ಹೆಕ್ಟೇರ್ ಪ್ರದೇಶದಲ್ಲಿ527 ಹಳ್ಳಿಗಳಲ್ಲಿ 6321ಜನ ರೈತರು ರೇಷ್ಮೆ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಬೇಸಿಗೆ ಕಾಲದಲ್ಲಿ ಉಷ್ಣಾಂಶ ಹೆಚ್ಚಿದ್ದು, ತೇವಾಂಶ ಕಡಿಮೆಯಾಗುವ ಕಾರಣ ರೇಷ್ಮೆ ಹುಳು ಸಾಕಾಣಿಕೆಯಲ್ಲಿ ಏರುಪೇರಾಗುವುದರಿಂದ ಬೆಳೆಗಳು ಹಾಲು ಮತ್ತು ಸಪ್ಪೆ ರೋಗಕ್ಕೆ ತುತ್ತಾಗುವ ಸಂಭವವಿರುತ್ತದೆ. ಈ ನಿಟ್ಟಿನಲ್ಲಿ ರೇಷ್ಮೆ ಕೃಷಿಕರು ಬೇಸಿಗೆ ಕಾಲದಲ್ಲಿ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ರೇಷ್ಮೆ ಇಲಾಖೆಯು ನೀಡಿದೆ. ಆ ಮುಂಜಾಗ್ರತಾ ಕ್ರಮಗಳು ಈ ಕೆಳಕಂಡಂತಿವೆ…
*ಹುಳು ಸಾಕಾಣಿಕೆಯ ಮನೆಯ ಸುತ್ತಲೂ ಗೋಡೆಗಳ ಮೇಲೆ ಬಿಸಿಲು ಬೀಳದಂತೆ ಚಪ್ಪರ ಹಾಕಬೇಕು. ದಕ್ಷಿಣ ಹಾಗೂ ಪಶ್ಚಿಮದ ಗೋಡೆಗಳು ಬಿಸಿಲಿನಿಂದ ಕಾಯದಂತೆ ಎಚ್ಚರ ವಹಿಸಬೇಕು. ಕಿಟಿಕಿಗಳಿಗೆ ಗೋಣಿ ತಾಟುಗಳನ್ನು ಹಾಕಿ ಆಗಿಂದಾಗ್ಗೆ ನೀರಿನಿಂದ ನೆನೆಸಬೇಕು.
*ರೇಷ್ಮೆ ಮನೆಯ ಮೇಲ್ಛಾವಣಿ ಬಿಸಿಲಿನಿಂದ ಕಾಯದಂತೆ ದಪ್ಪವಾಗಿ ತೆಂಗಿನಗರಿ, ಗೋಣಿ ಚೀಲ, ಶೆಡ್ ನೆಟ್ ಹೊದಿಸಿ ಹನಿ ಅಥವಾ ತುಂತುರು ನೀರಾವರಿ ಮೂಲಕ ಆಗಿಂದಾಗ್ಗೆ ನೀರನ್ನು ಸಿಂಪಡಿಸಬೇಕು.
*ಹುಳು ಸಾಕಾಣಿಕೆಗೆ ಅಗತ್ಯವಾದ ಸೊಪ್ಪನ್ನು ತಂಪು ಹೊತ್ತಿನಲ್ಲಿ ಕಟಾವು ಮಾಡಬೇಕು. ಬೆಳಗ್ಗೆ ಹಾಗೂ ರಾತ್ರಿ ವೇಳೆ ಹುಳುಗಳಿಗೆ ಸೊಪ್ಪು ನೀಡಬೇಕು.
*ಕಟಾವು ಮಾಡಿದ ಸೊಪ್ಪನ್ನು ಬೇಗನೆ ಸೊಪ್ಪು ಶೇಖರಣೆ ಕೊಠಡಿಗೆ ಸಾಗಿಸಿ ತೇವಾಂಶ ಹಾಳಾಗದಂತೆ ಸೊಪ್ಪನ್ನು ತೆಳು ಗೋಣಿ ತಾಟನ್ನು ನೀರಿನಲ್ಲಿ ನೆನಸಿ ಸೊಪ್ಪಿನ ಮೇಲೆ ಒದಿಸಬೇಕು.
* ಹುಳು ಸಾಕಾಣಿಕೆ ಮನೆ ಹೊರಭಾಗದ ಕಿಟಿಕಿಗಳ ನೇರಕ್ಕೆ ಎತ್ತರದಲ್ಲಿ ಫಾಗರ್ಸ್ ಗಳನ್ನು ಅಳವಡಿಸಿಕೊಳ್ಳಬೇಕು.
*ಹುಳು ಸಾಕಾಣಿಕೆ ಮನೆಯ ಒಳಭಾಗದಲ್ಲಿಯೂ ಸಹ ಹುಳು ಸಾಕಾಣಿಕೆಯ ಸ್ಟಾಂಡ್ ಗಳು ಮತ್ತು ಹುಳುಗಳಿಗೆ ಫಾಗರ್ಸ್ ನಿಂದ ಚಿಮ್ಮುವ ನೀರಿನ ಹನಿಗಳು ಬೀಳದಂತೆ ಎಚ್ಚರ ವಹಿಸಬೇಕು.
* ಮಣ್ಣಿನ ಮಡಿಕೆಗಳನ್ನು ಹುಳು ಸಾಕಾಣಿಕೆ ಮನೆಯ ಒಳಗಡೆ ನೀರು ತುಂಬಿಸಿ ನೇತು ಹಾಕಿದರೆ ಶೈತ್ಯಾಂಶ ಹೆಚ್ಚು ಮಾಡಬಹುದು.
*ಚಾಕಿ ಹಂತದಿಂದ ಪ್ರತಿ ದಿನ ಸುಣ್ಣ ಬಳಸಿದರೆ ರೋಗ ನಿಯಂತ್ರಣ ಮಾಡಬಹುದು. ಪ್ರತಿ ಹಂತದಲ್ಲೂ ಜ್ವರದ ನಂತರ ಹಾಸಿಗೆ ಸೋಂಕು ನಿವಾರಕಗಳನ್ನು ಬಳಸಬೇಕು.
*ಬೇಸಿಗೆಯಲ್ಲಿ ಹುಳು ಸಾಕಾಣಿಕೆ ಮನೆ ಉಷ್ಣತೆ 28ರಿಂದ30 ಸೆಲ್ಸಿಯಸ್ ಇದ್ದಲ್ಲಿ4 ಮತ್ತು 5ನೇ ಹಂತದ ಹುಳುಗಳಿಗೆ ಶೇ.60ರಷ್ಟು ತೇವಾಂಶ ಇರುವಂತೆ ಎಚ್ಚರಿಕೆ ವಹಿಸಬೇಕು.
*ಹಣ್ಣಾದ ಹುಳುಗಳನ್ನು ಚಂದ್ರಿಕೆಗಳಿಗೆ ಬಿಟ್ಟ ನಂತರ ಚಂದ್ರಿಕೆಗಳನ್ನು ನೆರಳಿನಲ್ಲಿ ಇಡತಕ್ಕದ್ದು ಹಾಗೂ ಚಂದ್ರಿಕೆಗಳನ್ನು ಇಟ್ಟ ಕೊಠಡಿಯಲ್ಲಿ ನಿಗದಿತ ಉಷ್ಣಾಂಶ ಹಾಗೂ ಶೈತ್ಯಾಂಶ ಇರುವಂತೆ ನೋಡಿಕೊಳ್ಳಬೇಕು.
*ಹಣ್ಣಾದ ಹುಳುಹಳನ್ನು ಪ್ಲಾಸ್ಟಿಕ್ ಚಂದ್ರಿಕೆಗಳಿಗೆ ಬಿಟ್ಟ ನಂತರ ಕಿಟಕಿ ಬಾಗಿಲುಗಳಿಂದ ಮುಕ್ತ ಗಾಳಿ ಬರುವಂತೆ ತೆರದಿಡಬೇಕು.
* ಬೇಸಿಗೆಯಲ್ಲಿ ಚಾಕಿ ಹುಳುಹಳನ್ನ ಹತ್ತಿರದ ಚಾಕಿ ಸಾಕಾಣಿಕಾ ಕೇಂದ್ರಗಳಿಂದ ಚಾಕಿ ಹುಳು ಪಡೆಯುವುದು ಉತ್ತಮ ಎಂದು ರೇಷ್ಮೆ ಇಲಾಖೆ ರೈತರಿಗೆ ಸೂಚನೆ ನೀಡಿದೆ.