ಬೇಸಿಗೆ ಆರಂಭ, ಕುಡಿಯುವ ನೀರು, ಜಾನುವಾರು ಮೇವಿಗೆ ಆದ್ಯತೆ ನೀಡಿ- ಮಾರ್ಚ್ ಅಂತ್ಯಕ್ಕೆ ಗರಿಷ್ಟ ನಿವೇಶನ ನೀಡಲು ಗುರಿ -ಕೆ.ಎಚ್. ಮುನಿಯಪ್ಪ

ಬೇಸಿಗೆ ಆರಂಭವಾಗುತಿದ್ದು, ಜಿಲ್ಲಾಡಳಿತ ಕುಡಿಯುವ ನೀರು ಹಾಗೂ ಜಾನುವಾರುಗಳ ಮೇವಿಗೆ ಆದ್ಯತೆ ನೀಡಬೇಕು ಮತ್ತು ಜಾನುವಾರುಗಳಿಗೆ ಬೇಸಿಗೆಯಲ್ಲಿ ಬಾಧಿಸುವ ರೋಗಗಳನ್ನು ಸರಿಯಾಗಿ ಉಪಚರಿಸಬೇಕೆಂದು ಆಹಾರ ನಾಗರಿಕ ಸರಬರಾಜು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಿದ್ದು, ಈ ಸಂಬಂಧ ಅಧಿಕಾರಿಗಳು ಸಭೆ ನಡೆಸಬೇಕು. ಹಣದ ಕೊರತೆಯಿಲ್ಲ, ಜಿಲ್ಲಾಧಿಕಾರಿ ಖಾತೆಯಲ್ಲಿ ಸಾಕಷ್ಟು ಹಣವಿದ್ದು, ಬಳಸಿಕೊಳಿ ಎಂದರು.

ಪೋಡಿ ಅಭಿಯಾನದಲ್ಲಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲೂ ಪ್ರಥಮ ಸ್ಥಾನ ಕಾಯ್ದುಕೊಳ್ಳುವುದರೊಂದಿಗೆ ರಾಜ್ಯದ ಮೊದಲ ಪೋಡಿಮುಕ್ತ ಜಿಲ್ಲೆಯಾಗುವಂತೆ ನೋಡಿಕೊಳ್ಳಬೇಕೆಂದರು.

ಗ್ರಾಮೀಣ ರಸ್ತೆಗಳು, ರೈತರ ಜಮೀನುಗಳಿಗೆ ರಸ್ತೆ, ಸ್ಮಶಾನದ ರಸ್ತೆಗಳ ಒದಗಿಸುವ ಸಂಬಂಧ ವಾರದಲ್ಲಿ ಒಂದು ದಿನ ಅಥವ ಒಂದು ಮಧ್ಯಾಹ್ನ ಈ ಬಗೆಗೆ ಅಧಿಕಾರಿಗಳ ಸಭೆಯಾಗಬೇಕೆಂದರು.

ಜಿಲ್ಲೆಯ ಹಲವು ಕೆರೆಗಳಲ್ಲಿ ಮಳೆಯಿಲ್ಲದ ಕಾರಣ ಮರ ಗಿಡಗಳು ಬೆಳೆದಿದ್ದು ಅವುಗಳ ತೆರವುಗೊಳಿಸಬೇಕು, ಹೂಳು ತುಂಬಿರುವ ಕೆರೆಗಳ ಹೂಳು ತೆಗೆಯುವ ಕಾರ್ಯವಾಗಬೇಕೆಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಿವೇಶನ ರಹಿತರಿಗೆ ಮಾರ್ಚ್ ಅಂತ್ಯದೊಳಗಾಗಿ ಗರಿಷ್ಟ ಪ್ರಮಾಣದ ನಿವೇಶನಗಳನ್ನು ಹಂಚಿಕೆ ಮಾಡಲು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲೆಯಲ್ಲಿ 20 ಸಾವಿರದಷ್ಟು ವಸತಿ ರಹಿತರು ನಿವೇಶನಗಳಿಗೆ ಅರ್ಜಿ ಸಲ್ಲಿಸಿದ್ದು, ಆದ್ಯತೆಯ ಮೇರೆಗೆ ನಿವೇಶನ ಹಂಚಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಸಿಇಓ ಕೆ.ಅನುರಾಧ, ಎಡಿಸಿ ಹೆಚ್.ಅಮರೇಶ್ ಜಿಲ್ಲಾಮಟ್ಟದ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *