ಕೋಲಾರ: ಬೇಸಿಗೆಯಲ್ಲಿ ಅಗ್ನಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತವೆ. ಅಗ್ನಿ ಶಾಮಕ ದಳದ ಸಿಬ್ಬಂದಿ ನಂದಿಸುವ ಕೆಲಸ ಮತ್ತು ಅಪಾಯದಲ್ಲಿರುವ ಜನ ಜಾನುವಾರುಗಳ ರಕ್ಷಣೆಗೆ ಸದಾ ಸನ್ನದ್ಧರಾಗಿರಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಹೊರವಲಯದ ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ, ಪರಿಶೀಲಿಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಯಾವುದೇ ವಿದ್ಯುತ್ ಮತ್ತು ಬೆಂಕಿ ಅವಘಡ ಸಂಭವಿಸಿದರೆ ತಾಲ್ಲೂಕಿನ ಅಗ್ನಿಶಾಮಕ ದಳ ಸೀಮಿತ ಸಿಬ್ಬಂದಿಯನ್ನಿಟ್ಟುಕೊಂಡು ತುರ್ತಾಗಿ ಧಾವಿಸಿ, ಬೆಂಕಿ ನಂದಿಸುವ ಕಾರ್ಯ ನಡೆಸಬೇಕು. ಪ್ರತಿ ವರ್ಷ ಅಂತರಗಂಗೆ ಬೆಟ್ಟದಲ್ಲಿ ಆಗಾಗ ಬೆಂಕಿಬಿದ್ದು ಪರಿಸರ ನಾಶದ ಜೊತೆಗೆ ಜೀವ ಸಂಕುಲಗಳಿಗೂ ಹಾನಿಯಾಗುತ್ತಿದೆ. ಜೊತೆಗೆ ಬಣವೆಗಳಿಗೆ ಬೆಂಕಿ, ಭತ್ತದ ಹುಲ್ಲಿಗೆ ಬೆಂಕಿ ಈ ರೀತಿ ಘಟನೆಯಾದ ತಕ್ಷಣ ಅಗ್ನಿಶಾಮಕ ಸಿಬ್ಬಂದಿಯು ಧಾವಿಸಿ ಬೆಂಕಿ ನಿಂದಿಸಿ ರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದರು.
ಅಗ್ನಿ ನಂದಿಸುವ ವಾಹನಗಳನ್ನು ಸದಾ ಸುಸಜ್ಜಿತ ಸ್ಥಿತಿಯಲ್ಲಿ ಇಟ್ಟುಕ್ಕೊಳ್ಳಿ ಯಾವುದೇ ತೊಂದರೆಯಾದರೂ ತಕ್ಷಣ ಸರಿಪಡಿಸಿ ಬೇಕಾಗಿರುವ ಪರಿಕರಣಗಳು, ಠಾಣೆಯ ಸುತ್ತ ತಡೆಗೋಡೆ ನಿರ್ಮಿಸುವುದು, ಬಣ್ಣ ಬಳಿಸುವುದು, ಠಾಣೆಯ ಮುಂದೆ ಸಿಮೆಂಟ್ ರಸ್ತೆಯ ವ್ಯವಸ್ಥೆ ಹಾಗೂ ಸಿಬ್ಬಂದಿ ದೃಢ ಹಾಗೂ ಆರೋಗ್ಯವಾಗಿರಲು ಜಿಮ್ ಸಾಮಗ್ರಿಗಳನ್ನು ಕೊಡಿಸಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಬೇಸಿಗೆಯಲ್ಲಿ ಬೆಂಕಿ ಅವಘಡಗಳು ಸಂಭವಿಸಿದರೆ ಬೆಂಕಿ ನಿಂದಿಸುವ ಬಗೆಯ ಕುರಿತು ಜನರಲ್ಲಿ ಅರಿವು, ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚಿ. ಅವಘಡಕ್ಕೆ ಕಾರಣವಾಗುವ ಅಂಶಗಳು ಮತ್ತು ತಡೆಯುವ ವಿಧಾನವನ್ನು ಕುರಿತು ಮಾಹಿತಿ ನೀಡಿ. ತುರ್ತು ಕರೆಗಳನ್ನು ಸ್ವೀಕರಿಸಿ ತಕ್ಷಣ ಕಾರ್ಯ ಪ್ರವೃತರಾಗಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ವೈ.ಶಿವಕುಮಾರ್, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂಜಿಮಲೆ ರಮೇಶ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ನಗರಸಭೆ ಸದಸ್ಯ ಅಫ್ಸರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಆರ್.ಹನುಮಂತರಾಯ, ಪ್ರಮುಖ ಸಿಬ್ಬಂದಿಗಳಾದ ಶ್ರೀನಾಥ್, ಲೋಕೇಶ್, ಅಶ್ವಥ್ ಹಾಗೂ ಇತರೆ ಸಿಬ್ಬಂದಿಗಳು ಹಾಜರಿದ್ದರು.