ಬೇಸಾಯ ಜೊತೆಗೆ ಕೃಷಿ ಉಪಕಸುಬುಗಳ ಅಳವಡಿಕೆಯಿಂದ ರೈತರ ಆದಾಯ ದ್ವಿಗುಣ- ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ್

ರೈತರ ಆದಾಯ ದ್ವಿಗುಣವಾದಾಗ ಮಾತ್ರ ರೈತರಿಗೆ ಕೃಷಿ ಲಾಭದಾಯಕ ಉದ್ಯಮ ಆಗುತ್ತದೆ. ಆದರೆ ರೈತರ ಆದಾಯ ದ್ವಿಗುಣಗೊಳ್ಳಲು ಕೃಷಿಯಿಂದ ಮಾತ್ರ ಸಾಧ್ಯವಾಗೋದಿಲ್ಲ, ಹೆಚ್ಚು ಹೆಚ್ಚು ಕೃಷಿಗೆ ಸಂಬಂಧಿಸಿದ ಉಪಕಸುಬುಗಳನ್ನು ಅಳವಡಿಸಿಕೊಂಡಾಗ ಮಾತ್ರ ಆದಾಯ ದ್ವಿಗುಣ ಆಗುತ್ತದೆ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ತಿಳಿಸಿದರು.

ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ 2023-24ನೇ ಸಾಲಿನ ಪೂರ್ವ ಮುಂಗಾರು ಕೃಷಿ ತಾಂತ್ರಿಕ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ‌ ಮಾತನಾಡಿದ ಅವರು, ಉಪಕಸುಬು ಬಗ್ಗೆ ರೈತರಿಗೆ ಅರಿವು ಮೂಡಿಸುವ ಸಲುವಾಗಿ ಸೆಕೆಂಡರಿ ಕೃಷಿ ನಿರ್ದೇಶನಾಲಯವನ್ನ ಸ್ಥಾಪನೆ ಮಾಡಲಾಗಿದೆ. ಈ ನಿರ್ದೇಶನಾಲಯವು ರೈತರಿಗೆ ಉಪಕಸುಬುನ್ನ ಕೃಷಿಯಲ್ಲಿ ಯಾವ ರೀತಿ ಅಳವಡಿಸಿಕೊಳ್ಳಬೇಕು, ಬೆಳೆ ಬೆಳೆಯುವುದು ಹೇಗೆ, ಬೆಳೆಯನ್ನು ಯಾವ ರೀತಿ ಸಂಸ್ಕರಣೆ ಮಾಡುವುದು, ಸಂಸ್ಕರಣೆ ಮಾಡಿರುವುದನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಕೌಶಲ್ಯತೆಯನ್ನ ರೈತರಿಗೆ ಕಲ್ಪಿಸಿ, ಕಲಿಸಿಕೊಡುತ್ತದೆ. ಇದರ ಸದುಪಯೋಗವನ್ನು ರೈತರು ಪಡೆದು ತಮ್ಮ ಆದಾಯವನ್ನು ದ್ವಿಗುಣ‌ ಮಾಡಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.

ರೈತರು ನಿರಂತರವಾಗಿ ರೈತ ಸಂಪರ್ಕ ಕೇಂದ್ರಗಳ ಜೊತೆ ಸಂಪರ್ಕ ಹೊಂದಿ, ಕೃಷಿಗೆ ಸಂಬಂಧಿಸಿದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಜೊತೆಗೆ ಕೃಷಿಯಲ್ಲಿ ತಾಂತ್ರಿಕ ಪದ್ಧತಿಯನ್ನ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಂತರ ಕೃಷಿ ಇಲಾಖೆಯ ಜಂಟಿ‌ ನಿರ್ದೇಶಕಿ ಲಲಿತಾ ರೆಡ್ಡಿ ಮಾತನಾಡಿ, ಈಗಾಗಲೇ ಮುಂಗಾರು ಪ್ರಾರಂಭವಾಗಿದೆ. ರೈತರಿಗೆ ಬೇಕಾದಂತಹ ಬಿತ್ತನೆ ಬೀಜ, ರಸ ಗೊಬ್ಬರ ಸೇರಿದಂತೆ ಕೃಷಿ ಪರಿಕರಗಳ ದಾಸ್ತಾನು ಮಾಡಲಾಗಿದೆ. ಸಕಾಲಕ್ಕೆ ರೈತರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆ ಸರ್ವ ಸನ್ನದ್ಧವಾಗಿದೆ ಎಂದರು.

ನಂತರ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಹನುಮಂತರಾಯ ಅವರು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಗೆ ಸಂಬಂಧಿಸಿದಂತೆ ಕನಿಷ್ಠ ಮೂರುದಿನಗಳ ಕಾಲ ವಸತಿ ಊಟದೊಂದಿಗೆ ರೈತ ಸ್ನೇಹಿ ಕಾರ್ಯಾಗಾರಗಳು ಹಮ್ಮಿಕೊಳ್ಳಲಾಗುತ್ತದೆ. ಮುಂಗಾರು, ಹಿಂಗಾರು, ಬೇಸಿಗೆ, ನೀರಾವರಿ ಸೇರಿದಂತೆ ಇತರೆ ಸನ್ನಿವೇಶ, ಮಣ್ಣಿನ ಫಲವತ್ತತೆ ಅನುಗುಣವಾಗಿ ಯಾವ ರೀತಿ ಬೆಳೆ ಬೆಳೆಯುವುದು ಎಂಬುದರ ಬಗ್ಗೆ ತರಬೇತಿ ನೀಡಲಾಗುವುದು ಎಂದರು.

ಹಾಗೇ ನಮ್ಮ ಕೃಷಿ ವಿಜ್ಞಾನಿಗಳು ರೈತರ ಬಳಿ ಹೋಗಿ ಕೃಷಿ ಚಟುವಟಿಕೆಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳುವುದು, ಬೆಳೆ ಸಂರಕ್ಷಣೆ, ಸಂಸ್ಕರಣೆ, ನಿರ್ವಹಣೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ತರಬೇತಿಯನ್ನು ನೀಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ವೈಜ್ಞಾನಿಕ ಕೃಷಿಗೆ ಹೆಚ್ಚು ಉತ್ತೇಜನ ನೀಡಲಾಗುವುದು, ಕೃಷಿ ಬೆಳೆ, ಅರಣ್ಯ ಬೆಳೆ, ತೋಟಗಾರಿಕೆ ಬೆಳೆ, ಕೃಷಿ ಉಪಕಸುಬಾದ ಹೈನುಗಾರಿಕೆ, ಕೋಳಿ, ಕುರಿ, ಮೇಕೆ, ಹಂದಿ ಸಾಕಾಣಿಕೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಾತ್ಯಕ್ಷಿಕೆ ಮೂಲಕ ರೈತರಿಗೆ ಮಾಹಿತಿ, ತರಬೇತಿ ನೀಡಿ ಅದನ್ನು ತಮ್ಮ ಕೃಷಿ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಲು ಉತ್ತೇಜಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದಿಂದ ಬಿಡುಗಡೆಗೊಂಡ ನೂತನ ತಳಿಗಳು ಮತ್ತು ತಂತ್ರಜ್ಞಾನ ಬಗ್ಗೆ ರೈತರಿಗೆ ಅರಿವು, ಮುಂಗಾರು ಹಂಗಾಮಿನಲ್ಲಿ ಮಣ್ಣು ಮತ್ತು ತೇವಾಂಶ ಸಂಸ್ಕರಣೆ ಕ್ರಮ, ವಿವಿಧ ಬೆಳೆಗಳ ಬೇಸಾಯ ಕ್ರಮ, ಸಸ್ಯ ಸಂಸ್ಕರಣೆ ಕ್ರಮ, ರಾಷ್ಟ್ರೀಯ ಬೀಜ ಪ್ರಾಯೋಜನೆ, ಕೃಷಿ ವಸ್ತು ಪ್ರದರ್ಶನ, ಬೀಜ ಮಾರಾಟ ಸೇರಿದಂತೆ ಇತರೆ ರೈತ ಸ್ನೇಹಿ ಮಾಹಿತಿ ಒದಗಿಸಲಾಗಿತ್ತು.

ಈ ವೇಳೆ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಡಾ.ಜಿ.ಎಂ.ನಾಗರಾಜ್, ತೋಟಗಾರಿಕೆ ಇಲಾಖೆ ಉಪನಿರ್ದೆಶಕ ಗುಣವಂತ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಅಪ್ಪಯ್ಯಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *