ದೊಡ್ಡಬಳ್ಳಾಪುರ: ಬೆಳೆಗಳಿಗೆ ದೃಷ್ಠಿ ತಾಕದಂತೆ ಮಾಡಲು ಮನೆಯಲ್ಲಿ ಬಳಸಿ ತೂತು ಹೋಗಿರುವ ಮಣ್ಣಿನ ಕರಿ ಮಡಿಕೆಗೆ ಸುಣ್ಣ ಬಳಿದು, ಮೂಗು, ವಿಕಾರ ಕಣ್ಣುಗಳನ್ನು ತಿದ್ದಿ ರೈತರು ತಮ್ಮ ಹೊಲದಲ್ಲಿಯೇ ದೊರೆಯುವ ಕೋಲುಗಳಿಗೆ ಹಳೇ ಬಟ್ಟೆ ಸುತ್ತಿ ಬೆದರು ಬೊಂಬೆಗಳನ್ನು ನಿಲ್ಲಿಸುತ್ತಿದ್ದರು.
ಆದರೆ, ಇದೀಗ ಮಣ್ಣಿನ ಕರಿ ಮಡಿಕೆಗಳು ಕಣ್ಮರೆಯಾಗಿರುವ ಈ ದಿನಗಳಲ್ಲಿ ತಾವು ಬೆಳೆದ ಬೆಳೆಗಳಿಗೆ ದೃಷ್ಠಿ ತಾಕದಂತೆ ತಡೆಯಲು ರೈತರು ಹೈಟೆಕ್ ವಿಧಾನ ಕಂಡುಕೊಂಡಿದ್ದಾರೆ.
ವಿವಿಧ ಸಿನಿಮಾ ಮೋಹಕ ತಾರೆಯರ ಹಾಗೂ ಇತ್ತೀಚೆಗೆ ರಾಮನಗರ, ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಜನಪ್ರಿಯ ದೃಷ್ಠಿ ಬೊಂಬೆಯಾಗಿ ಬಳಸುತ್ತಿರುವ ದಪ್ಪ ಕಣ್ಣು ಗುಡ್ಡೆ ಹೊಂದಿದ ಮಹಿಳೆಯ ಮುಖದ ಭಾವ ಚಿತ್ರದ ಫ್ಲೆಕ್ಸ್ ಗಳನ್ನು ಬೆಳೆಗಳ ನಡುವೆ ನೇತುಹಾಕುತ್ತಿದ್ದಾರೆ. ಇದೇ ರೀತಿ ತಾಲೂಕಿನ ಉಜ್ಜನಿ ಹಾಗೂ ಹೊಸಹಳ್ಳಿ ಕೆಲ ರೈತರು ತಮ್ಮ ಬೆಳೆಗಳಿಗೆ ದೃಷ್ಠಿ ತಾಕದಂತೆ ಬೆಳೆಗಳ ಮಧ್ಯೆ ಮೋಹಕ ತಾರೆಯರ ಭಾವಚಿತ್ರಗಳನ್ನು ಅಳವಡಿಸಿರುವ ದೃಶ್ಯ ಕಂಡುಬಂದಿದೆ.
ರಸ್ತೆಯಲ್ಲಿ ಹೋಗುವವರು ಬೆಳೆ ಹೇಗಿದೆ ಎಂದು ನೋಡುವುದಕ್ಕು ಮುನ್ನವೇ ಥಟ್ಟನೆ ಕಣ್ಣಿಗೆ ಬೀಳುತ್ತಿರುವುದೇ ಈ ಸಿನಿಮಾದ ಮೋಹಕ ತಾರೆಯರ ಭಾವಚಿತ್ರಗಳು.