ಬೆನಕನಹಳ್ಳ ಅಭಿವೃದ್ಧಿಗೆ ಮೂಲಸೌಕರ್ಯ ಅಗತ್ಯ: ನಿಸರ್ಗ ನಾರಾಯಣಸ್ವಾಮಿ

ದೊಡ್ಡಬಳ್ಳಾಪುರ: ಪುರಾತನ ದೇವಾಲಯಗಳು, ಧಾರ್ಮಿಕ ಮಹತ್ವ ಹಾಗೂ ಪ್ರಕೃತಿ ಸೌಂದರ್ಯದ ಸಂಗಮವಾಗಿರುವ ಬೆನಕನಹಳ್ಳವನ್ನು ಸಮರ್ಪಕ ಮೂಲಸೌಕರ್ಯಗಳೊಂದಿಗೆ ಅಭಿವೃದ್ಧಿಪಡಿಸಿದರೆ ಪ್ರಮುಖ ಧಾರ್ಮಿಕ ಮತ್ತು ಪ್ರವಾಸೋದ್ಯಮ ತಾಣವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತೂಬಗೆರೆ ಹೋಬಳಿಯ ಯದ್ದಲಹಳ್ಳಿ ಸಮೀಪದ ಬೆನಕನಹಳ್ಳದ ಶ್ರೀ ಬೆನಕಪ್ಪ ಸ್ವಾಮಿ ಹಾಗೂ ಶ್ರೀ ಶನಿಮಹಾತ್ಮ ಸ್ವಾಮಿ ದೇವಾಲಯಗಳಲ್ಲಿ ಶ್ರಾವಣ ಮಾಸದ ಕೊನೆಯ ಶನಿವಾರದ ಅಂಗವಾಗಿ ಆಯೋಜಿಸಿದ್ದ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬೆನಕನಹಳ್ಳ ಪ್ರದೇಶವು ಧಾರ್ಮಿಕ ಮಹತ್ವದ ಜೊತೆಗೆ ಅಪರೂಪದ ನೈಸರ್ಗಿಕ ಸೌಂದರ್ಯವನ್ನು ಹೊಂದಿದ್ದು, ವರ್ಷಪೂರ್ತಿ ಸಾವಿರಾರು ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಾರೆ. ಆದರೆ ರಸ್ತೆ, ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬರುತ್ತಿದೆ. ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳಿಂದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವೇದಿಕೆಯಾಗಲಿದೆ ಎಂದು ಹೇಳಿದರು.

ಶ್ರಾವಣ ಶನಿವಾರದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ, ಶನಿಶಾಂತಿ, ನವಗ್ರಹ ಹೋಮ–ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ಇದೇ ಸಂದರ್ಭದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀ ಆಂಜನೇಯ ಸ್ವಾಮಿ ಕಿರು ದೇವಸ್ಥಾನವನ್ನು ಉದ್ಘಾಟಿಸಲಾಯಿತು.

ದೇವಾಲಯವನ್ನು ಹೂವುಗಳು ಹಾಗೂ ವರ್ಣರಂಜಿತ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಭಕ್ತರು ಸರದಿಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಭಕ್ತರ ಇಷ್ಟಾರ್ಥಗಳು ಈಡೇರಲಿ, ರಾಜ್ಯದಲ್ಲಿ ಉತ್ತಮ ಮಳೆ ಹಾಗೂ ಸಮೃದ್ಧ ಬೆಳೆ ಉಂಟಾಗಲಿ ಎಂಬ ಸಂಕಲ್ಪದೊಂದಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಹಿರೇಮುದ್ದೇನಹಳ್ಳಿ ಗ್ರಾಮದಿಂದ ವಾದ್ಯಮೇಳದೊಂದಿಗೆ ಆಗಮಿಸಿದ ಸುಮಂಗಲಿಯರು ಪೂರ್ಣಕುಂಭ ಮತ್ತು ಆರತಿಯೊಂದಿಗೆ ದೇವಾಲಯ ಪ್ರವೇಶಿಸಿ ಪ್ರದಕ್ಷಿಣೆ ಸಲ್ಲಿಸಿ ವಿಶೇಷ ಪೂಜೆ ನೆರವೇರಿಸಿದರು. ಕಾರ್ಯಕ್ರಮದ ಅಂಗವಾಗಿ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಸಂಜೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಗಾಯಕ ಮಲ್ಲೇಶ್ ಸಂಗಡಿಗರಿಂದ ಧಾರ್ಮಿಕ ಗಾಯನ ಮತ್ತು
ಶನಿಮಹಾತ್ಮನ ಮಹಿಮೆ ಕುರಿತ ಹರಿಕಥೆ ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಆಸ್ವಾದಿಸಿದರು.

ಕಾರ್ಯಕ್ರಮದಲ್ಲಿ ಪೂಜಾ ಸೇವಾಕರ್ತ ಕೃಷ್ಣಾಚಾರಿ, ತುಮಕೂರು ಚಿದಾನಂದ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನಾಗರಾಜು, ಸುರೇಶ್ ಬಾಬು, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರತಾಪ್, ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್, ಗಂಗಾಧರ್ ಹಾಗೂ ರಾಮಕೃಷ್ಣ, ಜೆಡಿಎಸ್ ಮುಖಂಡರಾದ ಗೌರೀಶ್ ಮತ್ತು ಮುರುಳಿ, ನಿವೃತ್ತ ಯೋಧ ಗೋಪಾಲ್, ಯುವ ಮುಖಂಡ ಉದಯ ಆರಾಧ್ಯ, ಮುಖಂಡರಾದ ಗುರುಪ್ರಸಾದ್, ರಮೇಶ್, ದೇವರಾಜ್, ಶಶಿಕುಮಾರ್, ನರಸಿಂಹಸ್ವಾಮಿ, ಪ್ರಸಾದ್, ಪ್ರಶಾಂತ್, ಲಕ್ಷ್ಮೀಪತಿ, ಶ್ರೀನಿವಾಸ್, ಗೋವಿಂದರಾಜು, ಪುರೋಹಿತರಾದ ನರಸೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಯೋಗ್ಯತೆ ಇದ್ದರೆ ಎಸ್‌ಡಿಆರ್‌ಎಫ್ ಹಣ ಕೊಡಿಸಿ- ಕುಮಾರಸ್ವಾಮಿ ಟೀಕೆಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ರೈತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬರ ಪರಿಹಾರದ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಡಿದ್ದ ಟೀಕೆಗೆ ಸಚಿವ…

10 hours ago

ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದ ಕಾರ್ಮಿಕರ ಶಾಲೆ: ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಕಾರ್ಮಿಕರಿಗಾಗಿಯೇ ಪ್ರತಿ ತಾಲೂಕಿನಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಶಾಲೆ ತೆರೆಯಲು ಸರ್ಕಾರ ಮುಂದಾಗಿದೆ ಎಂದು ಜಿಲ್ಲಾ ಉಸ್ತುವಾರಿ…

12 hours ago

ಸಾಗುವಳಿ ಚೀಟಿಗಳ ಅಕ್ರಮ ಮಂಜೂರಾತಿ ಬಯಲು; ಅರ್ಹರಿಗಷ್ಟೇ ಹಕ್ಕು, ಸ್ವಯಂಘೋಷಿತ ಬುದ್ಧಿವಂತರಿಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

ನಾಗಮಂಗಲ: ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತಾಲೂಕಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬರೋಬ್ಬರಿ 691 ಪ್ರಕರಣಗಳಲ್ಲಿ ಕಾನೂನುಬಾಹಿರವಾಗಿ ಸಾಗುವಳಿ ಚೀಟಿ…

12 hours ago

ಪೋಷಕರ ಗೌರವವೇ ಬದುಕಿನ ಮೊದಲ ಪಾಠ- ಸುರೇಶ್ ಗೌಡ ಬಿ

ದೊಡ್ಡಬಳ್ಳಾಪುರ: ಯುವಕರು ಮೊದಲು ತಂದೆ-ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು. ನಂತರ ಪಾಠ-ಪ್ರವಚನಗಳನ್ನು ಕಲಿಯಬೇಕು ಎಂದು ಹೈಕೋರ್ಟ್ ವಕೀಲರಾದ ಸುರೇಶ್ ಗೌಡ ಬಿ.ವಿದ್ಯಾರ್ಥಿಗಳಿಗೆ…

12 hours ago

10.50 ಕೋಟಿ ಸಾಲ ವಂಚನೆ ಆರೋಪ: ಸೌಂದರ್ಯ ಸೌಹಾರ್ದ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷನ ವಿರುದ್ಧ ಎಫ್‌ಐಆರ್‌

ಬೆಂಗಳೂರು: ಸೂಕ್ತ ದಾಖಲೆಗಳನ್ನು ಪರಿಶೀಲಿಸದೆ 10.50 ಕೋಟಿ ಸಾಲ ಮಂಜೂರು ಮಾಡಿ ಸೌಂದರ್ಯ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗೆ ಆರ್ಥಿಕ…

14 hours ago

ಬೆಳ್ಳಂಬೆಳಗ್ಗೆ ಭೀಕರ ಅಪಘಾತ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ದೊಡ್ಡಬಳ್ಳಾಪುರ: ತಾಲ್ಲೂಕಿನ ಮಾಕಳಿ ರೈಲ್ವೆ ನಿಲ್ದಾಣದ ಸಮೀಪ ಹಿಂದೂಪುರ–ಯಲಹಂಕ ಹೆದ್ದಾರಿಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್…

22 hours ago