
ಆನ್‌ಲೈನ್ ಜೂಜಾಟದ ಮೂಲಕ ತಮ್ಮ 22 ವರ್ಷದ ಮಗ ಮಾಡಿದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ ವಿವಾಹಿತ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಯು.ಮಹೇಶ್ವರ ರೆಡ್ಡಿ (45) ಮತ್ತು ಅವರ ಪತ್ನಿ ಮಂಗಳವಾರ ರಾತ್ರಿ ನಂದ್ಯಾಲ ಜಿಲ್ಲೆಯ ಅಬ್ದುಲ್ಲಾಪುರಂ ಗ್ರಾಮದ ತಮ್ಮ ಜಮೀನಿನಲ್ಲಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದಾರೆ.
ಮಹೇಶ್ವರ್ ಮತ್ತು ಪ್ರಶಾಂತಿ ದಂಪತಿಯ ಪುತ್ರ ನಿಖಿಲ್. ಪದವಿಗಾಗಿ ಬೆಂಗಳೂರಿಗೆ ಕಳುಹಿಸಿದಾಗ ಬೆಟ್ಟಿಂಗ್ ಚಟಕ್ಕೆ ಬಿದ್ದು ₹2.40 ಕೋಟಿ ಸಾಲ ಮಾಡಿಕೊಂಡಿದ್ದಾನೆ.
ಮಗ ಮಾಡಿದ ಕೋಟ್ಯಂತರ ರೂಪಾಯಿ ಸಾಲ ತೀರಿಸಲಾಗದೆ ದಂಪತಿಗಳು ಕೀಟನಾಶಕ ಬೆರೆಸಿದ ತಂಪು ಪಾನೀಯ ಸೇವಿಸಿದ್ದಾರೆ ಎಂದು ಆತ್ಮಕೂರು ಉಪವಿಭಾಗದ ಪೊಲೀಸ್ ಅಧಿಕಾರಿ ರಾಮಾಂಜಿ ನಾಯ್ಕ್ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮಹೇಶ್ವರ್ ರೆಡ್ಡಿ ಈಗಾಗಲೇ 2 ಕೋಟಿ ರೂಪಾಯಿ ಸಾಲವನ್ನು ತೀರಿಸಲು ತನ್ನ ಐದು ಎಕರೆ ಜಮೀನನ್ನು ಮಾರಾಟ ಮಾಡಿದ್ದರು. ಉಳಿದ ಸಾಲಗಳನ್ನು ತೀರಿಸಲು ಪಾಲಕರು ತಮ್ಮ 10 ಎಕರೆ ಜಮೀನು, ಮನೆ ಮಾರಿದರೂ ಸಾಲ ತೀರಿಸಲು ಆಗಲಿಲ್ಲ.
ಕಳೆದ ಆರು ತಿಂಗಳಿನಿಂದ, ದಂಪತಿಗಳು ಸಂಬಂಧಿಕರೊಂದಿಗೆ ವಾಸಿಸುತ್ತಿದ್ದರು, ಮಗ ಹೈದರಾಬಾದ್‌ನಲ್ಲಿ ನೆಲೆಸಿದ್ದನು.
ಸಾಲ ಕೊಟ್ಟವರ ಒತ್ತಡ ಹೆಚ್ಚಾದ ಕಾರಣ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.