ಇಂದು ಹಾವೇರಿ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟವರಿಗೆ ಸರ್ಕಾರದ ವತಿಯಿಂದ ತಲಾ ರೂ.2 ಲಕ್ಷ ಪರಿಹಾರ ಘೋಷಣೆ ಮಾಡಲಾಗಿದೆ.
ಇಂದು ನಸುಕಿನ ಜಾವ 4 ಗಂಟೆ ಸುಮಾರಿಗೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ ಗೆ ಹಿಂದಿನಿಂದ ಟಿಟಿ ವಾಹನ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಿಟಿ ವಾಹನದಲ್ಲಿದ್ದ 7 ಮಂದಿ ಮಹಿಳೆಯರು ಸೇರಿ 13 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಪರಶುರಾಮ್(45), ಭಾಗ್ಯ(40), ನಾಗೇಶ(50), ವಿಶಾಲಾಕ್ಷಿ(40), ಅರ್ಪಿತಾ(18), ಸುಭದ್ರಾ ಬಾಯಿ(65), ಪುಣ್ಯ(50), ಮಂಜುಳಾಬಾಯಿ, ಚಾಲಕ ಆದರ್ಶ್(23), ಮಾನಸ(24), ರೂಪಾ(40), ಮಂಜುಳಾ(50) ಎಂದು ಗುರುತಿಸಲಾಗಿದೆ. ಎಲ್ಲರೂ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಎಹಟ್ಟಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಟಿಟಿ ವಾಹನದಲ್ಲಿದ್ದ ಒಟ್ಟು 15 ಜನರು ಸವದತ್ತಿ ರೇಣುಕಾ ಯಲ್ಲಮ್ಮ ದರ್ಶನ ಪಡೆದು ಮರಳಿ ಊರಿಗೆ ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ.