ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದಕೂಡಲೇ ರಾಜ್ಯದಲ್ಲಿ ಹಲವು ಬದಲಾವಣೆ ಮಾಡುವ ಬರದಲ್ಲಿ ತೊಡಗಿದೆ. ಅದೇರೀತಿ ಹಲವು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಮಂಗಳವಾರ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಗುಪ್ತಚರ ಇಲಾಖೆ ಹೆಚ್ಚುವರಿ ಡಿಜಿಪಿಯಾಗಿದ್ದ ಬಿ. ದಯಾನಂದ ಅವರನ್ನು ಎತ್ತಂಗಡಿ ಮಾಡಿ, ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಲಾಗಿದೆ.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತೆ ಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಎಡಿಜಿಪಿ ಮತ್ತು ಬೆಂಗಳೂರು ನಗರದ ಸಂಚಾರ ವಿಭಾಗದ ವಿಶೇಷ ಆಯುಕ್ತರಾಗಿದ್ದ ಎಂ.ಎ. ಸಲೀಂ ಅವರನ್ನು ಸಿಐಡಿ ಡಿಜಿಯಾಗಿ ನೇಮಿಸಲಾಗಿದೆ.
ಕ್ರಿಮಿನಲ್ ತನಿಖೆ ವಿಭಾಗದ ಎಡಿಜಿಪಿ ಆಗಿದ್ದ ಶರತ್ ಚಂದ್ರ ಅವರನ್ನು ಕೂಡಲೇ ಜಾರಿಗೆ ಬರುವಂತೆ ಗುಪ್ತಚರ ಇಲಾಖೆ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ.