
ಬೆಂಗಳೂರು ನಗರಕ್ಕೆ ಕೂಗಳತೆ ದೂರದಲ್ಲಿರುವ ಊರಲ್ಲಿ ಒಂದು ಸಣ್ಣ ತಂಗುದಾಣವಿಲ್ಲ. ಬಸ್ ನಿಲ್ದಾಣ ಕಟ್ಟಿಕೊಡಲು ದಾನಿಯೇ ಮುಂದೆ ಬಂದರು ಗ್ರಾಮ ಪಂಚಾಯಿತಿ ಅನುಮತಿ ನೀಡದೇ ಅಡ್ಡಗಾಲು ಹಾಕುತ್ತಿದೆ. ತಂಗುದಾಣವಿಲ್ಲದೆ ಬಿಸಿಲು, ಮಳೆಯಲ್ಲಿ ಜನರು ಬಸ್ ಗಾಗಿ ಕಾಯುತ್ತಾರೆ. ಅದು ಎಲ್ಲಿ ಅಂತೀರಾ ಈ ಸ್ಟೋರಿ ಓದಿ….
ಯೆಸ್…. ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕಿನ ಸೊಣ್ಣೇನಹಳ್ಳಿ ಗ್ರಾಮದಲ್ಲಿ ಸುಮಾರು 30-40 ವರ್ಷಗಳಿಂದ ಬಸ್ ಸ್ಟಾಂಡ್ ನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತಹ ಸುಸಜ್ಜಿತ ತಂಗುದಾಣವಿಲ್ಲ. ವೃದ್ಧರು, ಮಹಿಳೆಯರು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ರೋಗಿಗಳು ಸೇರಿದಂತೆ ಇತರೆ ಪ್ರಯಾಣಿಕರು ಮಳೆ, ಗಾಳಿ, ಬಿಸಿಲನಲ್ಲಿ ನೊಂದು, ಬೆಂದು, ತೋಯ್ದು ಬಸ್ ಹತ್ತಿ, ಇಳಿದು ಮನೆಗಳು ಹಾಗೂ ಇತರೆ ಸ್ಥಳಗಳಿಗೆ ತೆರಳುತ್ತಾರೆ, ಆಗಮಿಸುತ್ತಾರೆ.

ಇದನ್ನ ಮನಗೊಂಡ ಊರಿನ ಯುವಕ ಪ್ರಯಾಣಿಕರ ಅನೂಕಲಕ್ಕಾಗಿ ಸ್ವಂತ ಹಣದಲ್ಲಿ ತಂಗುದಾಣ ನಿರ್ಮಿಸಲು ಮುಂದಾಗಿದ್ದು, ಆದರೆ, ಇದಕ್ಕೆ ಸೊಣ್ಣೇನಹಳ್ಳಿ ಗ್ರಾಮ ಪಂಚಾಯಿತಿ ಅನುಮತಿ ನೀಡದೇ ಅಡ್ಡಗಾಲು ಹಾಕುತ್ತಿದೆ.
ಸೊಣ್ಣೇನಹಳ್ಳಿ ಗ್ರಾಮದಲ್ಲಿ NH7 – NH4 ಹೆದ್ದಾರಿ ಹಾದುಹೋಗುತ್ತದೆ. ಈ ಹೆದ್ದಾರಿ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಧುರೆ ದೇವಸ್ಥಾನ, ಬೆಂಗಳೂರು, ಯಲಹಂಕ, ರಾಜಾನುಕುಂಟೆ ಸೇರಿದಂತೆ ಇತರೆ ಊರುಗಳಿಗೆ ನೂರಾರು ಬಸ್ ಗಳು ಓಡಾಡುತ್ತವೆ.

ಈ ವೇಳೆ ನರಸಿಂಹಮೂರ್ತಿ ಮಾತನಾಡಿ, ದೀಪದ ಬುಡದಲ್ಲಿ ಕತ್ತಲು ಎಂಬಂತೆ ನಮ್ಮ ಗ್ರಾಮ ಸೊಣ್ಣೇನಹಳ್ಳಿ ರಾಜಧಾನಿಗೆ ಕೂಗಳತೆ ದೂರದಲ್ಲೇ ಇದ್ದರೂ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕೊರತೆಯಿಂದಾಗಿ ಸೊರಗುತ್ತಿದೆ.
ಪ್ರಯಾಣಿಕರು ಬಿಸಿಲು-ಮಳೆಗೆ ಮೈಯೊಡ್ಡಿ ಬಸ್ಸಿಗಾಗಿ ಕಾದು ಕಾದು ನಿತ್ರಾಣರಾಗುವ ಸ್ಥಿತಿ ನಿರ್ಮಾಣವಾಗಿದೆ. ಪ್ರಯಾಣಿಕರು ರಸ್ತೆ ಇಕ್ಕೆಲಗಳಲ್ಲಿ ನಿಂತು ನರಕಯಾತನೆ ಅನುಭವಿಸಬೇಕಾಗಿದೆ. ಬಸ್ಸಿಗಾಗಿ ಕಾಯುವ ಪ್ರಯಾಣಿಕರಲ್ಲಿ ಅಂಗವಿಕಲರು, ಮಕ್ಕಳು, ವೃದ್ಧರು, ಮಹಿಳೆಯರು, ರೋಗಿಗಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಬಿಸಿಲಲ್ಲೇ ನಿಲ್ಲಬೇಕಾಗಿದೆ..ಈ ಹಿನ್ನೆಲೆ ನಾನೇ ನನ್ನ ಸ್ವಂತ ಹಣದಿಂದ ತಂಗುದಾಣ ನಿರ್ಮಿಸಲು ಮುಂದಾಗಿದ್ದೆ. ಆದರೆ, ಗ್ರಾಮಪಂಚಾಯಿತಿ ಅಡ್ಡಗಾಲು ಹಾಕುತ್ತಿದೆ ಎಂದರು.

ನಗರದಲ್ಲಿ ತಂಗುದಾಣ ಇಲ್ಲದೇ ಇರುವ ಕಾರಣ ಕೆಲ ಬಸ್ ಗಳು ನಿಲುಗಡೆ ಮಾಡದೇ ಹೋರಟು ಹೋಗುತ್ತವೆ. ಆಗ ಬಸ್ಸಿಗಾಗಿ ಗಂಟೆಗಟ್ಟಲೇ ಕಾದು ಕುಳಿತ ಪ್ರಯಾಣಿಕರು ಮತ್ತೆ ರಸ್ತೆಯಲ್ಲೇ ಇನ್ನಷ್ಟು ಸಮಯ ಕಳೆಯಬೇಕಾದ ದುಸ್ಥಿತಿ ನಿರ್ಮಾಣವಾಗುತ್ತಿದೆ. ಪ್ರಯಾಣಿಕರು ರಸ್ತೆಯಲ್ಲೇ ಬಸ್ಸಿಗೆ ನಿಲ್ಲುತ್ತಿರುವುದರಿಂದ ಕೆಲವೊಮ್ಮೆ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದರು.
ನಗರದ ಅಭಿವೃದ್ಧಿಗೆ ಕೋಟ್ಯಂತರ ರೂ.ಖರ್ಚು ಮಾಡುವ ಜನಪ್ರತಿನಿಧಿಗಳು, ತಾಲೂಕು ಆಡಳಿತ, ನಗರಸಭೆ ಅಧಿಕಾರಿಗಳಿಗೆ ತಂಗುದಾಣ ನಿರ್ಮಿಸಬೇಕೆಂಬ ಕನಿಷ್ಠ ಕಾಳಜಿ ಇಲ್ಲದಿರುವುದು ಸೊಣ್ಣೇನಹಳ್ಳಿ ಜನರ ದೌರ್ಭಾಗ್ಯವೇ ಸರಿ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಸೂಕ್ತ ಹಾಗೂ ಪ್ರಯಾಣಿಕ ಸ್ನೇಹಿ ತಂಗುದಾಣ ನಿರ್ಮಿಸಬೇಕೆಂಬುದು ಜನರ ಒಕ್ಕೊರಲ ಆಗ್ರಹವಾಗಿದೆ ಎಂದು ಹೇಳಿದರು.