ಬೆಂಗಳೂರು- ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಕನ್ನಡ ಮಾಯ..!: ಕನ್ನಡ ಭಾಷೆಯ ಚಲನಚಿತ್ರ, ಕಾರ್ಯಕ್ರಮಗಳಿಗೆ ಮಾನ್ಯತೆ ನೀಡದ ರೈಲ್ವೆ ಸಚಿವಾಲಯ: ಕನ್ನಡಿಗರ ಆಕ್ರೋಶ

ಬೆಂಗಳೂರು ಮತ್ತು ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ 20661/62 ರಲ್ಲಿ ಕನ್ನಡ ಮಾಯ..! ಯಾವುದೇ ಕನ್ನಡ ಚಲನಚಿತ್ರಗಳು ಅಥವಾ ಕನ್ನಡ ಕಾರ್ಯಕ್ರಮಗಳ ಪಟ್ಟಿ ಇಲ್ಲದೇ ಇರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಸಂಚರಿಸುವ ರೈಲಿನಲ್ಲಿ ಕನ್ನಡ ಭಾಷೆಯ ಚಲನಚಿತ್ರ, ಕನ್ನಡ ಕಾರ್ಯಕ್ರಮಗಳಿಗೆ ಮಾನ್ಯತೆ ನೀಡದೇ ತೆಲುಗು, ತಮಿಳು, ಹಿಂದಿ, ಇಂಗ್ಲಿಷ್ ಭಾಷೆಯ ಚಲನಚಿತ್ರಗಳ ಆಯ್ಕೆ ಪಟ್ಟಿ ಇದೆ.

ಕೇಂದ್ರ ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಅವರೇ ಬೆಂಗಳೂರು ಮತ್ತು ಧಾರವಾಡ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ 20661/62 ರಲ್ಲಿ ಯಾವುದೇ ಕನ್ನಡ ಚಲನಚಿತ್ರಗಳು ಅಥವಾ ಕನ್ನಡ ಕಾರ್ಯಕ್ರಮಗಳು ಇಲ್ಲವೇ ಇಲ್ಲ. ಇದನ್ನು ತಕ್ಷಣ ಸರಿ ಮಾಡಬೇಕಾಗಿ ಕನ್ನಡಿಗರ ಆಗ್ರಹ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಅವರು ಟ್ವೀಟ್ ಮಾಡಿದ್ದಾರೆ.

ಈ ಒಂದು ಬೆಂಗಳೂರು–ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಸಂಚಾರಕ್ಕೆ ಜೂನ್.27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭೋಪಾಲ್ ನ ರಾಣಿ ಕಮಲಪತಿ ನಿಲ್ದಾಣದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದರು.

ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಪಾಲ ಥಾವರಚಂದ್ ಗೆಲ್ಹೋಟ್, ಶಾಸಕ ಅರವಿಂದ ಬೆಲ್ಲದ್, ಪರಿಷತ್ ಸದಸ್ಯ ಸಂಕನೂರ ಮೇಯರ್ ವೀಣಾ ಭಾರದ್ವಾಡ ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *