ಸರ್ಕಾರಗಳು ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಲು ಕಠಿಣ ಕಾನೂನು ಜಾರಿ ಮಾಡಿದೆ. ಆದರೆ ಬೆಂಗಳೂರಿಗೆ ಕೂಗಳತೆ ದೂರದಲ್ಲೇ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ. ದೇವಾಲಯಕ್ಕೆ ಆ ಗ್ರಾಮದಲ್ಲಿ ದಲಿತರ ಪ್ರವೇಶ ನಿಷೇಧ. ಓರ್ವ ಮಹಿಳೆಯ ಧೈರ್ಯದಿಂದಾಗಿ ತಾಲೂಕು ಆಡಳಿತ ಗ್ರಾಮಕ್ಕೆ ಭೇಟಿ ನೀಡಿ, ದಲಿತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ….
ಹೌದು…. ಹೀಗೆ ಗ್ರಾಮದಲ್ಲಿ ಬೀಡು ಬಿಟ್ಟಿರುವ ಅಧಿಕಾರಿಗಾಳು, ಅಧಿಕಾರಿಗಳ ಮುಂದೆ ತಮಗಾದ ತಾರತಮ್ಯವನ್ನ ಹೇಳುತ್ತಿರುವ ಮಹಿಳೆ, ಗ್ರಾಮದಲ್ಲಿ ಶಾಂತಿ ಸಭೆ ಮಾಡುತ್ತಿರುವ ತಹಶಿಲ್ದಾರ್…. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೂಳ್ಯ ಗ್ರಾಮದಲ್ಲಿ.
ಹೌದು… ಈ ಗ್ರಾಮದ ಹೇಗಡ್ಲಮ್ಮ ದೇವಾಲಯಕ್ಕೆ ದಲಿತರಿಗೆ ಪ್ರವೇಶ ಇಲ್ಲ. ದಲಿತರು ದೇವರಿಗೆ ಪೂಜೆ ಮಾಡಿಸಲು ಬಂದಾಗ ದೇವಾಲಯದ ಒಳಗೆ ಬಿಡದೆ ಹೊರಗೇ ನಿಲ್ಲಿಸಿ ಆರತಿ ನೀಡಲಾಗುತ್ತಿತ್ತು. ದೇವಾಲಯ ನಿರ್ಮಾಣಕ್ಕೆ ಗ್ರಾಮದ ಎಲ್ಲಾ ಜನಾಂಗದ ಜನರಿಂದಲೂ ತೆರಿಗೆ ಹಣ ಸಂಗ್ರಹ ಮಾಡಲಾಗಿತ್ತು. ಜಾತ್ರಾ ಸಮಯದಲ್ಲಿಯೂ ಕೂಡ ದೇವಾಲಯಕ್ಕೆ ದಲಿತರಿಗೆ ಪ್ರವೇಶವಿಲ್ಲ. ಅವರು ಕೊಡುವ ತೆರಿಗೆ ಹಣ ಮಾತ್ರ ಬೇಕು, ದೇವಾಲಯದ ಒಳಗೆ ಮಾತ್ರ ಪ್ರವೇಶವಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗಾಗಿ ಊರಿನ ಓರ್ವ ಮಹಿಳೆ ಧೈರ್ಯ ಮಾಡಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಇನ್ನೂ ಅಸ್ಪೃಶ್ಯತೆ ವಿಚಾರವಾಗಿ ದೂರು ಬಂದ ಹಿನ್ನೆಲೆ, ತಹಶಿಲ್ದಾರ್ ವಿಭಾ ವಿದ್ಯಾ ರಾಥೊಡ್, ಡಿವೈಎಸ್ಪಿ ರವಿ, ಇನ್ಸ್ಪೆಕ್ಟರ್ ಸಾಧಿಕ್ ಪಾಷ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ಮಾಡಿದರು. ಈ ವೇಳೆ ಗ್ರಾಮ ಪಂಚಾಯತಿ ಅಧ್ಯಕ್ಷರು, ಗ್ರಾಮದ ಮುಖಂಡರ ನೇತೃತ್ವದಲ್ಲಿ ಸಭೆ ನಡೆದು, ದೇವಾಲಯ ಪ್ರವೇಶಕ್ಕೆ ಯಾರಿಗೂ ಅಡ್ಡಿ ಇಲ್ಲ ಎಂಬ ನಿರ್ಧಾರಕ್ಕೆ ಬಂದರು. ನಂತರ ಪಂಚಾಯತಿ ಅಧ್ಯಕ್ಷೆಯೇ ಪೂಜೆ ಮಾಡಿ ದಲಿತರಿಗೆ ಆರತಿಯನ್ನ ನೀಡಿದರು.
ನೂರಾರು ವರ್ಷಗಳ ಇತಿಹಾಸವುಳ್ಳ ದೇವಾಲಯ ಈಗ ಅಸ್ಪೃಶ್ಯತೆಯಿಂದ ಕುಖ್ಯಾತಿ ಪಡೆದಿದೆ. ಅಲ್ಲದೆ ಈ ಹಿಂದಿನಿಂದಲೂ ಪೂಜೆ ಮಾಡಿಕೊಂಡು ಬರುತ್ತಿದ್ದ ಪೂಜಾರಿ ಇನ್ನು ಮುಂದೆ ದೇವರಿಗೆ ಪೂಜೆ ಸಲ್ಲಿಸಲ್ಲ ಎಂಬ ನಿರ್ಧಾರಕ್ಕೆ ಬಂದ ಹಿನ್ನಲೆ, ಈಗ ತಾಲೂಕು ಆಡಳಿತ ಹೊಸ ಪೂಜಾರಿಯ ಹುಡುಕಾಟದಲ್ಲಿದೆ. ಅಲ್ಲದೆ ಶಾಂತಿ ಸಭೆಯ ನಂತರ ದೇವಾಲಯ ಬೀಗ ಕೂಡ ಹಾಕಿಲ್ಲ. ಇದೇ ವಿಚಾರಕ್ಕೆ ಪಂಚಾಯತಿಯಲ್ಲಿ ಸರ್ವ ಸದಸ್ಯರ ಸಭೆ ಕರೆದು ಮುಂದಿನ ನಡೆಯ ಬಗ್ಗೆ ತೀರ್ಮಾನ ಮಾಡಲಾಗುತ್ತಿದೆ.
ಒಟ್ಟಾರೆ ಹಳ್ಳಿಗಳಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿದ್ದು, ಅಧಿಕಾರಿಗಳು ಜನರಿಗೆ ಅರಿವು ಮೂಡಿಸಬೇಕಿದೆ. ಇನ್ನು ಈ ಗ್ರಾಮದ ಮಹಿಳೆ ತೋರಿದ ಧೈರ್ಯಕ್ಕೆ ಒಂದು ಸಮಾಜ ವಿರೋಧ ವ್ಯಕ್ತಪಡಿಸಿದರೂ ದಲಿತರಿಗೆ ಸಮಾನತೆ ದೊರೆತಿದ್ದು ಪ್ರಶಂಸನೀಯ. ಇನ್ನಾದರೂ ಗ್ರಾಮಸ್ಥರು ಅನಿಷ್ಟ ಪದ್ದತಿಗಳನ್ನ ಬಿಟ್ಟು ಎಲ್ಲರೂ ಒಟ್ಟಾಗಿ ಸಮನ್ವಯ ರೀತಿಯಲ್ಲಿ ಬಾಳುತ್ತಾರಾ ಕಾದು ನೋಡಬೇಕಿದೆ.