
ಬೆಂಗಳೂರು ವಾಯುವ್ಯ ವಿಭಾಗದ ಮಾದನಾಯಕನಹಳ್ಳಿ ರಾಮ್ ದೇವ್ ಜ್ಯುವೆಲರ್ಸ್‌ನಲ್ಲಿ ಗನ್ ತೋರಿಸಿ ನಡೆದ ದರೋಡೆ ಪ್ರಕರಣವನ್ನು ಪೊಲೀಸರು ಕೇವಲ ಏಳು ದಿನಗಳಲ್ಲಿ ಭೇದಿಸಿದ್ದಾರೆ. ಚಿನ್ನದ ಬೆಲೆ ಹೆಚ್ಚಳದ ಹಿನ್ನೆಲೆಯಲ್ಲಿ ದರೋಡೆಗೆ ಸಂಚು ರೂಪಿಸಿದ್ದ ರಾಜಸ್ಥಾನ ಮೂಲದ ಐವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ನೆಲಮಂಗಲ, ಫೆಬ್ರವರಿ 09: ಅದು ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ದರೋಡೆ ಗನ್ ಹಿಡಿದು ಚಿನ್ನಾಭರಣದ ಅಂಗಡಿಗೆ ನುಗಿದ್ದ ಗ್ಯಾಂಗ್ ಸಿಕ್ಕಸಿಕ್ಕ ಒಡವೆಗಳನ್ನ ದೋಚಿ ಪರಾರಿಯಾಗಿದ್ದರು. ಆರೋಪಿಗಳ ಬೆನ್ನತ್ತಿದ್ದ ಮಾದನಾಯಕನಹಳ್ಳಿ ಪೊಲೀಸರು ಘಟನೆ ನಡೆದ ಕೇವಲ ಏಳು ದಿನದಲ್ಲಿ ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳು
ಅನೂಪ್ ಸಿಂಗ್, ರವಿ, ಅಂಕಿತ್, ಅರುಣ್, ಅನೂಪ್ ರಾಮ್ ಬಂಧಿತರು. ಬಂಧಿತರೆಲ್ಲಾ ರಾಜಸ್ತಾನಿ ಮೂಲದವರು. ದರೋಡೆ ನಂತರ ರಾಜಸ್ಥಾನಕ್ಕೆ ತೆರಳಿದ ಆರೋಪಿಗಳನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ.
ಕಳೆದ ವಾರವಷ್ಟೇ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ದಾಸಪುರದ ರಾಮ್ ದೇವ್ ಜ್ಯವೆಲರ್ಸ್ನಲ್ಲಿ ಈ ಭಯಾನಕ ದರೋಡೆ ನಡೆದಿತ್ತು. ದರೋಡೆಕೋರರು ಗನ್ ತೋರಿಸಿ 30 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಸದ್ಯ ಐವರು ಆರೋಪಿಗಳನ್ನ ಮಾದನಾಯಕನಹಳ್ಳಿ ಪೊಲಿಸರು ಬಂಧಿಸಿದ್ದಾರೆ.
ದರೋಡೆಗೆ ಪಕ್ಕಾ ಸ್ಕೆಚ್
ಇನ್ನು ಈ ಆರೋಪಿಗಳಲ್ಲಿ ಅಂಕಿತ್ ಮಾದನಾಯಕನಹಳ್ಳಿ ವಾಸವಿದ್ದ. ಕಚೋರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ. ಎಷ್ಟು ದಿನ ಈ ರೀತಿ ಜೀವನ ಸಾಗಿಸುವುದು ಎಂದು ನಿರ್ಧರಿಸಿದ್ದ ಆತ ದರೋಡೆ ಪ್ಲ್ಯಾನ್ ಮಾಡಿದ್ದ. ಇತನಿಗೆ ರವಿ ಎಂಬಾತ ಸಾಥ್ ನೀಡಿದ್ದ. ರವಿ ರಾಜಸ್ಥಾನದಲ್ಲಿದ್ದು, ಆತನ ಬಳಿ ಪಿಸ್ತೂಲ್ ಕೂಡ ಇತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಆರೋಪಿಗಳು ದರೋಡೆ ಮಾಡಲು ಪ್ಲ್ಯಾನ್ ಮಾಡಿದ್ದರು.
ಪ್ಲ್ಯಾನ ಪ್ರಕಾರ ಜನವರಿ 27ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿರುವ ರಾಮ್ ದೇವ್ ಜ್ಯುವೆಲರ್ಸ್ಗೆ ನುಗಿದ್ದ ದರೋಡೆಕೋರರು ಗನ್ ತೋರಿಸಿ ಜ್ಯುವೆಲ್ಲರಿ ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ಕದ್ದು ಪರಾರಿ ಆಗಿದ್ದರು. ಖದೀಮರ ಕೈಚಳಕ ಸಿಸಿಟಿ ಟಿವಿಯಲ್ಲಿ ಸೆರೆ ಆಗಿತ್ತು. ಇನ್ನು ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿದ್ದರು.
ಒಟ್ಟಿನಲ್ಲಿ ಆರೋಪಿಗಳ ಬೆನ್ನತ್ತಿದ್ದ ಮಾದನಾಯಕನಹಳ್ಳಿ ಪೊಲೀಸರು ಇದೀಗ ಎಲ್ಲರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಗಳನ್ನ ಕಸ್ಟಡಿಗೆ ಪಡೆದಿರುವ ಮಾದನಾಯಕಹಳ್ಳಿ ಪೊಲಿಸರು ವಿಚಾರಣೆ ನಡೆಸಿದ್ದಾರೆ.