ಮನೆಯ ಯಜಮಾನ ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕ, ಬರುವ ದಿನಗೂಲಿಯಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದರು, ಕಷ್ಟದ ದುಡಿಮೆಯಲ್ಲಿ ಇಬ್ಬರು ಮಕ್ಕಳ ವಿದ್ಯಾಭ್ಯಾಸ ಮಾಡಿಸುತ್ತಾ ಭವಿಷ್ಯದ ಕನಸು ಕಂಡಿದ್ದರು, ರಾತ್ರಿ ನಡೆದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಇಡೀ ಮನೆ ಹೊತ್ತಿ ಉರಿದಿದೆ, ಅಡುಗೆ ಮಾಡಲು ಸಂಗ್ರಹಿಸಿದ ರೇಷನ್, ಧರಿಸಲು ಇಟ್ಟಿದ ಬಟ್ಟೆಗಳ ಜೊತೆ ದಾಖಲೆ ಪತ್ರಗಳು ಸುಟ್ಟು ಭಸ್ಮವಾಗಿದೆ, ಇಡೀ ಕುಟುಂಬ ಊಟಕ್ಕೂ ಹಣವಿಲ್ಲದೆ ಅಕ್ಷರಶಃ ಬೀದಿಗೆ ಬಿದ್ದಿದೆ.
ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆಯ ಒಂದನೇ ಹಂತದಲ್ಲಿ ತಡರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ವಿದ್ಯುತ್ ಅವಘಡದಲ್ಲಿ ಅಂಬಿಕಾ ಮತ್ತು ಸೋಮಶೇಖರ್ ದಂಪತಿ ವಾಸವಾಗಿದ್ದ ಮನೆ ಸಂಪೂರ್ಣವಾಗಿ ಸುಟ್ಟು ಬೂದಿಯಾಗಿದೆ, ಅದೃಷ್ಟವಶಾತ್ ಗಂಡ, ಹೆಂಡತಿ ಇಬ್ಬರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ಅವಘಡದಲ್ಲಿ ಮನೆಯಲ್ಲಿದ್ದ ರೇಷನ್, ಬಟ್ಟೆಗಳು, ದಾಖಲೆಗಳಾದ ಆಧಾರ್ ಕಾರ್ಡ್, ವೋಟರ್ ಐಡಿ, ಬ್ಯಾಂಕ್ ಪಾಸ್ ಸಹ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ.
ಮಕ್ಕಳ ಪಠ್ಯ ಪುಸ್ತಕ ಸಹ ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಬೂದಿಯಾಗಿದೆ, ಸದ್ಯ ಆ ಕುಟುಂಬದವರಿಗೆ ತಿನ್ನಲು ಒಂದು ಕಾಳು ಅಕ್ಕಿ ಸಹ ಇಲ್ಲದೆ ಭಿಕ್ಷೆ ಬೇಡುವ ಪರಿಸ್ಥಿತಿಯಲ್ಲಿದೆ ಎಂದು ಮನೆ ಯಜಮಾನಿ ಅಂಬಿಕಾ ತಿಳಿಸಿದ್ದಾರೆ.
ಸೋಮಶೇಖರ್ ಕುಟುಂಬ ಸದಸ್ಯರು ನಿನ್ನೆ ರಾತ್ರಿ ಊಟ ಮಾಡಿ ಮಲಗಿದ್ದಾರೆ, ಮುಂಜಾನೆ 1 ಗಂಟೆ ಸಮಯದಲ್ಲಿ ಮನೆಯ ಬಳಿಯ ವಿದ್ಯುತ್ ಕಂಬದಲ್ಲಿ ವಿದ್ಯುತ್ ಕಿಡಿಯ ಶಬ್ಧ ಕೇಳಿ ಬಂದಿದೆ, ಗಂಡ ಹೆಂಡತಿ ಇಬ್ಬರು ಹೊರಗೆ ಬಂದು ನೋಡುವ ಸಮಯದಲ್ಲಿ ಮನೆಯೊಳಗಿದ್ದ ಟಿವಿ ಸ್ಫೋಟಗೊಂಡಿದೆ, ಸ್ಫೋಟದಿಂದ ಉಂಟಾದ ಬೆಂಕಿ ಇಡೀ ಮನೆಯನ್ನ ಅವರಿಸಿದೆ, ಹೊತ್ತಿ ಉರಿಯುತ್ತಿದ್ದ ಮನೆಯೊಳಗಿಂದ ಮಲಗಿದ್ದ ಮಕ್ಕಳನ್ನ ಹೊರಗೆ ಕರೆ ತಂದಿದ್ದಾರೆ, ಒಂದು ಕ್ಷಣ ತಡವಾಗಿದ್ದರು ಮಕ್ಕಳ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇತ್ತು, ಅದೃಷ್ಟವಶಾತ್ ಇಡೀ ಕುಟುಂಬ ಬೆಂಕಿ ಅವಘಡದಲ್ಲಿ ಪಾರಾಗಿದೆ ಎಂದು ಸ್ಥಳೀಯ ಜಗನ್ನಾಥ್ ತಿಳಿಸಿದರು.
ಮನೆಯಲ್ಲಿದ್ದ ಪ್ರತಿಯೊಂದು ವಸ್ತುಗಳನ್ನ ಕಳೆದುಕೊಂಡಿರುವ ಕುಟುಂಬ ಅಕ್ಷರಶಃ ಬೀದಿಗೆ ಬಂದಿದೆ, ದಾನಿಗಳ ಸಹಾಯದ ನಿರೀಕ್ಷೆಯಲ್ಲಿರುವ ಕುಟುಂಬಕ್ಕೆ ನೆರವಿನ ಅಗತ್ಯವಿದೆ.