ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ, ಮನುಷ್ಯರನ್ನು ವಿಭಜಿಸುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಿ ಎಂದು ಸಿಎಂ ಸಿದ್ದರಾಮಯ್ಯ ಅವರು ಕರೆ ಕೊಟ್ಟರು.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಮುಂಭಾಗ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಸಂವಿಧಾನ ಎತ್ತಿ ಹಿಡಿದಿರುವ ಬಹುತ್ವವನ್ನು ನಾವು ಬದುಕಿನಲ್ಲಿ ಆಚರಿಸೋಣ. ಆ ಮೂಲಕ ಸಮಾಜ ಒಡೆಯುವ ದುಷ್ಟರ ಷಡ್ಯಂತ್ರ ಸೋಲಿಸೋಣ. ಪ್ರಜಾಪ್ರಭುತ್ವ ಗಟ್ಟಿಗೊಳಿಸೋಣ ಎಂದರು.
ಬುದ್ಧ, ಬಸವಣ್ಣನ ಕಾಲದಲ್ಲೇ ನಮ್ಮಲ್ಲಿ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಇತ್ತು. ಅನುಭವ ಮಂಟಪ ಮೊದಲ ಪ್ರಜಾಪ್ರಭುತ್ವದ ಸಾಂಸ್ಥಿಕ ಸಂಕೇತವಾಗಿದೆ ಎಂದು ಹೇಳಿದರು.
1949ರ ನವೆಂಬರ್ 25ನೇ ತಾರೀಕಿನಂದು ಬಾಬಾ ಸಾಹೇಬರು ಮಾಡಿದ ಭಾಷಣ ಅತ್ಯಂತ ಅರ್ಥಪೂರ್ಣವಾಗಿದೆ. ನಾವೀಗ ವೈರುಧ್ಯತೆಯಿರುವ ಸಮಾಜಕ್ಕೆ ಕಾಲಿಡುತ್ತಿದ್ದೇವೆ, ಜನರಿಗೆ ಕೇವಲ ರಾಜಕೀಯ ಸ್ವಾತಂತ್ರ್ಯ ನೀಡಿದರೆ ಸಾಲದು, ಅದರ ಜೊತೆಗೆ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ನೀಡಬೇಕು. ಇಲ್ಲದಿದ್ದರೆ ಜನರೇ ಪ್ರಜಾಪ್ರಭುತ್ವದ ಸೌಧವನ್ನು ಧ್ವಂಸ ಮಾಡುತ್ತಾರೆ ಎಂಬ ಎಚ್ಚರಿಕೆ ಅವರು ನೀಡಿದ್ದರು. ಹೀಗಾಗಿ ಆರ್ಥಿಕ-ಸಾಮಾಜಿಕ ಪ್ರಜಾಪ್ರಭುತ್ವ ಎಲ್ಲರಿಗೂ ಸಿಕ್ಕಾಗ ಮಾತ್ರ ರಾಜಕೀಯ ಸ್ವಾತಂತ್ರಕ್ಕೆ ಅರ್ಥ ಬರುತ್ತದೆ. ತಾರಾತಮ್ಯವು ಆಚರಣೆಯಲ್ಲಿ ಇರುವವರೆಗೂ ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ ಎಂದರು.
ಸಂವಿಧಾನದ ಪೀಠಿಕೆಯಲ್ಲಿ ಅತ್ಯಂತ ದೊಡ್ಡ ಮೌಲ್ಯಗಳಿವೆ. ಹೀಗಾಗಿಯೇ ಪ್ರತಿ ದಿನ ಶಾಲಾ ಕಾಲೇಜುಗಳಲ್ಲಿ ಇದನ್ನು ಓದಿಸುವ, ಅರ್ಥೈಸುವ, ಪಾಲಿಸುವ ಪ್ರಯತ್ನ ಮುನ್ನಡೆಸಿದ್ದೇವೆ ಎಂದು ತಿಳಿಸಿದರು.
ನಮ್ಮ ರಾಷ್ಟ್ರಗೀತೆ ಮತ್ತು ನಮ್ಮ ನಾಡಗೀತೆಯಲ್ಲಿರುವ ಭಾರತ ಮತ್ತು ಕರ್ನಾಟಕ ನಮ್ಮದಾಗಬೇಕು. ಯಾವುದೇ ತಾರತಮ್ಯ ಇಲ್ಲದ ಶಾಂತಿಯ ತೋಟ ನಮ್ಮದಾಗಬೇಕು ಎಂದರು.
ಸಮಾಜದಲ್ಲಿರುವ ಅಸಮಾನತೆ ತೊಡೆದು ಹಾಕುವವರೆಗೂ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ. ನಮ್ಮ ಸರ್ಕಾರ ಸಮಾನತೆ ಸಾಧಿಸುವ ದಿಕ್ಕಿನಲ್ಲಿ, ಎಲ್ಲಾ ಜಾತಿ-ಎಲ್ಲಾ ಧರ್ಮದ ಬಡವರಿಗೆ, ಮಧ್ಯಮ ವರ್ಗದವರಿಗೆ ಶಕ್ತಿ ತುಂಬುವ ಕಾರ್ಯಕ್ರಮ ರೂಪಿಸಿ ಜಾರಿ ಮಾಡಿದ್ದೇವೆ ಎಂದು ಹೇಳಿದರು.
ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ ವಿಚ್ಚಿದ್ರಕಾರಕ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಬೇಕು. ಬನ್ನಿ ಎದ್ದು ನಿಲ್ಲೋಣ ಎಂದರು.
ಏಕತೆ ಭಜನೆ ಮಾಡುವ ವಿಚ್ಚಿದ್ರಕಾರಕ ದುಷ್ಟ ಶಕ್ತಿಗಳು ಸಾಮಾಜಿಕ ನ್ಯಾಯ, ಸಮಾನತೆಯ ವಿರೋಧಿಗಳು. ಇವರು ಸಮಾಜದ ಶತ್ರುಗಳು. ಇವರನ್ನು ಮೆಟ್ಟಿ ನಿಲ್ಲದ ಹೊರತು ಮಹಿಳೆಯರ, ದಲಿತರ, ಹಿಂದುಳಿದವರಿಗೆ ಹಕ್ಕುಗಳು, ಅವಕಾಶಗಳು ಸಿಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಈ ಬಿಜೆಪಿ ಮತ್ತು ಇವರ ಜೊತೆಗಿರುವ ವಿಚ್ಚಿದ್ರಕಾರಕ ಶಕ್ತಿಗಳು ಬಡವರ, ಮಧ್ಯಮ ವರ್ಗದ ವಿರೋಧಿಗಳು. ಇವರು ಬಡವರ ಪರವಾದ ಕಾರ್ಯಕ್ರಮಗಳು ಜಾರಿ ಆಗಲು ಬಿಡುವುದಿಲ್ಲ. ಆದ್ದರಿಂದ ಇವರನ್ನು ನಾವು ಸೋಲಿಸಬೇಕು ಎಂದು ತಿಳಿಸಿದರು.
20 ಲಕ್ಷಕ್ಕೂ ಹೆಚ್ಚು ಮಂದಿಯ ಮಾನವ ಸರಪಳಿ ರಚಿಸಿರುವುದೇ ದುಷ್ಟಶಕ್ತಿಗಳಿಗೆ ಎಚ್ಚರಿಕೆ ನೀಡಿ ಮನುಷ್ಯ ಸಮಾಜವನ್ನು ಬೆಸೆಯುವುದಾಗಿದೆ ಎಂದರು.
ಪ್ರಜಾಪ್ರಭುತ್ವ ದಿನದ ರಾಯಭಾರಿ ಹರೇಕಳ ಹಾಜಬ್ಬ, ಪೌರ ಕಾರ್ಮಿಕರಾದ ನಾಗಲಕ್ಷ್ಮಿ, ಮಂಜುಳ ಹಾಗೂ ತೃತೀಯ ಲಿಂಗಿ ಪ್ರಿಯಾಂಕ ಮತ್ತು ಇಬ್ಬರು ವಿಶೇಷ ಚೇತನ ವಿದ್ಯಾರ್ಥಿಗಳು ಇಲ್ಲಿ ಹಾಜರಿದ್ದು, ಈ ದಿನದ ಮೆರುಗು ಹೆಚ್ಚಿಸಿದ್ದಾರೆ ಎಂದು ಹೇಳುತ್ತಾ ಎಲ್ಲರಿಗೂ ಧನ್ಯವಾದ ತಿಳಿಸಿದರು.