ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಕಾರಹಳ್ಳಿ ಗ್ರಾಮದ ಬಳಿಯ ಬಿ ಎಸ್ ಎಫ್ ಕ್ಯಾಂಪಸ್ ನಲ್ಲಿ ಹೊಸದಾಗಿ 8.500 ಗಿಡಗಳನ್ನು ನೆಡುವುದರ ಜೊತೆಗೆ ಆ ಪ್ರದೇಶಕ್ಕೆ ಸಾಲುಮರದ ತಿಮ್ಮಕ್ಕ ವನ ಎಂದು ನಾಮಕರಣ ಮಾಡಲಾಗಿದೆ.
ಬಿ ಎಸ್ ಎಫ್, ಗೋಕುಲ್ ದಾಸ್ ಎಕ್ಸ್ ಪೋರ್ಟ್ ಫೌಂಡೇಶನ್ ಮತ್ತು ಕ್ಯಾಚ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ಕಾರಹಳ್ಳಿಯ ಬಿ ಎಸ್ ಎಫ್ ಅಧೀನದಲ್ಲಿರುವ ಗುಡ್ಡ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ 8.500 ವಿವಿಧ ಜಾತಿಯ ಗಿಡಗಳನ್ನು ನೆಡಲಾಗುವುದು. ಅಭಿಯಾನಕ್ಕೆ ಕರ್ನಾಟಕ ರತ್ನ, ಶತಾಯುಷಿ ಸಾಲುಮರದ ತಿಮ್ಮಕ್ಕ ಚಾಲನೆ ನೀಡಿದರು.
ಇತ್ತೀಚೆಗೆ ಸಾರ್ವಜನಿಕರಲ್ಲಿ ಪ್ರಕೃತಿ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲಾಗುತ್ತಿದ್ದು, ಪರಿಸರ ಉಳಿಸುವ ನಿಟ್ಟಿನಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತಿರುತ್ತಾರೆ ಎಂದು ಬಿಎಸ್ ಎಫ್ ಅಧಿಕಾರಿ ಡಿ ಕೆ ಯಾದವ್ ಶ್ಲಾಘಿಸಿದರು.
ಬಿ ಎಸ್ ಎಫ್ ಕ್ಯಾಂಪಸ್ ನಲ್ಲೀಗ 8.500 ಗಿಡಗಳನ್ನು ನೆಟ್ಟು ಬೆಳೆಸುವ ಅಭಿಯಾನಕ್ಕೆ ಚಾಲನೆ ದೊರೆತಿದ್ದು ಸಮಾಜ ಮುಖಿ ಸಂಸ್ಥೆಗಳ ಸಹಯೋಗ ಅತ್ಯಗತ್ಯ ಎಂದು ಅವರು ಹೇಳಿದರು.
ಇದೇ ವೇಳೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಬಿ ಎಸ್ ಎಫ್ ಅಧಿಕಾರಿ ಡಿ ಕೆ ಯಾದವ್,ಗೋಕುಲ್ ದಾಸ್ ಅಧಿಕಾರಿಗಳಾದ ಅಮಿತ್ ಶರ್ಮ,ಮಹಾಂತೇಶ್ ಬಂಗಾರಿ,ಪ್ರಣಾಲ್ ಗೋಸ್ವಾಮಿ ಸೇರಿದಂತೆ ಗೋಕುಲ್ ದಾಸ್ ಕಂಪೆನಿ ಹಾಗೂ ಕ್ಯಾಚ್ ಫೌಂಡೇಶನ್ ಸಿಬ್ಬಂದಿ ಭಾಗವಹಿಸಿದ್ದರು.