ಇಂದು ಸಂಜೆ 4 ಗಂಟೆಯಿಂದ ಬಿಟ್ಟುಬಿಡದೇ ಸುರಿಯುತ್ತಿರುವ ವರ್ಷದ ಮೊದಲ ಮಳೆಗೆ ತಾಲೂಕಿನ ಜನತೆ ಒಂದು ಕಡೆ ಫುಲ್ ಖುಷ್ ಪಟ್ಟರೆ, ಮತ್ತೊಂದು ಕಡೆ 2024-25ನೇ ಸಾಲಿನ ಕನಿಷ್ಠ ಬೆಂಬಲ ಯೋಜನೆಯಡಿ ಈಗಾಗಲೇ ನೋಂದಣಿಯಾದ ರೈತರು ರಾಗಿಯನ್ನು ನಗರದ ರಾಗಿ ಖರೀದಿ ಕೇಂದ್ರದ ಬಳಿ ಟ್ರ್ಯಾಕ್ಟರ್ ಗಳಲ್ಲಿ ಹೊತ್ತು ತಂದಿದ್ದಾರೆ.
ಇದೀಗ ಏಕಾಏಕಿ ಮಳೆ ಬಂದಿದ್ದರಿಂದ ರಾಗಿ ಮೂಟೆಗಳು ಮಳೆಯಲ್ಲಿ ನೆನೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಟಾರ್ಪಲ್ ಗಳು ಇಟ್ಟುಕೊಂಡಿರುವ ರೈತರು ರಾಗಿ ಮೂಟೆಗಳಿಗೆ ಹೊದಿಸುವ ಕೆಲಸ ಮಾಡುತ್ತಿದ್ದಾರೆ. ಟಾರ್ಪಲ್ ಗಳು ಇಲ್ಲದೇ ಇರುವವರು ಪರದಾಡುತ್ತಿದ್ದಾರೆ.
ಮುಂದಿನ ನಾಲ್ಕೈದು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸೇರಿ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.