ಬಿರುಸಿನಿಂದ ನಡೆಯುತ್ತಿರುವ ಟಿಎಪಿಎಂಸಿಎಸ್ ಮತದಾನ

ದೊಡ್ಡಬಳ್ಳಾಪುರ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಚುನಾವಣೆ ನ.2 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢ ಶಾಲಾ ವಿಭಾಗ) ಆಯೋಜನೆ ಮಾಡಲಾಗಿದ್ದು, ಬಿರುಸಿನಿಂದ ಮತದಾನ ನಡೆಯುತ್ತಿದೆ..

5,571 ಮತದಾರರಿದ್ದು, ಇಂದು ನಡೆಯುತ್ತಿರುವ ಮತದಾನಕ್ಕೆ ಮತದಾನ ಹಾಗೂ ಮತಗಳ ಎಣಿಕೆಗಾಗಿ 80 ಸಿಬ್ಬಂದಿ ನೇಮಿಸಲಾಗಿದೆ. 12 ಕೊಠಡಿಗಳಲ್ಲಿ ಮತದಾನ ನಡೆಯುತ್ತಿದೆ. ಪ್ರತಿಯೊಂದು ಕೊಠಡಿಯಲ್ಲೂ 8 ಮತಪೆಟ್ಟಿಗೆಗಳು ಇವೆ.

ಮತದಾರರು ಟಿಎಪಿಎಂಸಿಎಸ್ ವತಿಯಿಂದ ನೀಡಲಾಗಿರುವ ಭಾವಚಿತ್ರ ಇರುವ ಗುರುತಿನ ಚೀಟಿಯನ್ನು ತೋರಿಸುವ ಮೂಲಕ ಮತದಾನ ಮಾಡಲು ತೆರಳುತ್ತಿದ್ದಾರೆ. ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾದ ನಂತರ ಮತಗಳ ಎಣಿಕೆ ನಡೆಯಲಿದೆ. ಸುಗಮ ಮತದಾನಕ್ಕಾಗಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿದೆ.

ಅಂತಿಮ ಚುನಾವಣಾ ಕಣದಲ್ಲಿ ‘ಎ’ ತರಗತಿಯ 5 ನಿರ್ದೇಶಕ ಸ್ಥಾನಗಳಿಂದ 9 ಜನ, ‘ಬಿ’ ತರಗತಿಯ 8 ನಿರ್ದೇಶಕ ಸ್ಥಾನಗಳಿಗೆ 19 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

‘ಎ’ ತರಗತಿಯಲ್ಲಿ 20 ಜನ ಮತದಾರರು ಇದ್ದು, ಒಬ್ಬರು 5 ಜನ ನಿರ್ದೆಶಕರನ್ನು ಆಯ್ಕೆಮಾಡಬೇಕು. ‘ಬಿ’ ತರಗತಿಯಲ್ಲಿ 5, 571 ಜನ ಮತದಾರರು ಇದ್ದು, ಒಬ್ಬರು 8 ನಿರ್ದೆಶಕರನ್ನು ಆಯ್ಕೆ ಮಾಡಬೇಕಿದೆ.

ಎ ಮತ್ತು ಬಿ ತರಗತಿಯ ಎಲ್ಲಾ 13 ಸ್ಥಾನಗಳಿಗೂ ಕಾಂಗ್ರೆಸ್ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯೊಂದಿಗೆ ಎಲ್ಲಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ.

Leave a Reply

Your email address will not be published. Required fields are marked *

error: Content is protected !!