ದೊಡ್ಡಬಳ್ಳಾಪುರ: ನೆನ್ನೆ ಸಂಜೆ ಬಿರುಗಾಳಿ ಸಹಿತ ಸುರಿದ ಮಳೆಗೆ ಬಾಳೆ, ಈರೆಗಿಡ, ಅಡಿಕೆ ಬೆಳೆಗಳು ನೆಲಕ್ಕೆ ಉರುಳಿ ಬಿದ್ದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದಲ್ಲಿ ನಡೆದಿದೆ.
ಸುಧಾಕರ್, ನಂಜೇಗೌಡ, ಮಂಜುನಾಥ, ಜಯರಾಮಯ್ಯ, ದೇವರಾಜಪ್ಪ ಎಂಬ ರೈತರಿಗೆ ಸೇರಿದ್ದ ಬಾಳೆ ಗಿಡಗಳು ಅರ್ಧಕ್ಕೆ ಮುರಿದು ಬಿದ್ದಿವೆ.
ಚೆನ್ನರಾಯಪ್ಪ ಎಂಬ ರೈತನಿಗೆ ಸೇರಿದ್ದ 1 ಎಕರೆಯಲ್ಲಿ ಬೆಳೆದಿದ್ದ ಈರೆಗಿಡ ಸಹ ನೆಲಕಚ್ಚಿದೆ. ಚಪ್ಪರ ಸಹಿತ ನೆಲಕ್ಕೆ ಬಿದ್ದ ಕಾರಣ ಬೆಳೆ ಸಂಪೂರ್ಣ ನಾಶವಾಗಿದೆ.
ಇನ್ನೊಂದು ತಿಂಗಳಲ್ಲಿ ಬೆಳೆ ಕಟಾವು ಮಾಡಬೇಕಿತ್ತು, ಬೆಳೆ ಕಟಾವಿಗೆ ರೈತರು ಸಿದ್ಧತೆ ಮಾಡಿಕೊಂಡಿದ್ದರು, ಆದರೆ, ನಿನ್ನೆ ಸಂಜೆ ಬಂದ ಬಿರುಗಾಳಿ ಸಹಿತ ಮಳೆಗೆ ಬೆಳೆ ನಾಶವಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ನಾವು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ ಮಳೆಯಿಂದಾಗಿ ನಮಗೆ ತುಂಬಾ ನಷ್ಟವಾಗಿದೆ, ಸರ್ಕಾರ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದ್ದಾರೆ.