2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಹಿನ್ನೆಲೆ ಇದನ್ನು ಗುರಿಯಾಗಿಸಿಕೊಂಡು ಕೆಲ ಬಿಜೆಪಿ ನಾಯಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ಪೋಸ್ಟ್ ಮಾಡಿ ಕುಹಕ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದ ಬಿಜೆಪಿ ಮುಖಂಡರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಈ ಕುರಿತು ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾ ವಕ್ತಾರೆ ಪುಷ್ಪಾ ಶಿವಶಂಕರ್, ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಿ.ಟಿ.ರವಿ ಸೇರಿದಂತೆ ಇತರೆ ಪ್ರಮುಖ ನಾಯಕರ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸಿ, ಅವಹೇಳನ ಪೋಸ್ಟ್ ಮಾಡುವವರ ವಿರುದ್ಧ ಸೈಬರ್ ಕ್ರೈಂ ಠಾಣೆಗೆ ದೂರು ನೀಡುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಸೋಲಿಗೆ ಯಾವ ನಾಯಕರು ಕಾರಣರಲ್ಲ, ಅದರಲ್ಲೂ ಬಿ.ಎಲ್.ಸಂತೋಷ್ ಪಾತ್ರ ಏನೂ ಇಲ್ಲ, ಅವರು ರಾಜಕೀಯದಿಂದ ಬಹಳ ದೂರ ಇದ್ದಾರೆ ಅವರು ಕೇವಲ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಅಂತಹವರ ವಿರುದ್ಧ ಕುಹಕ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಪಕ್ಷ ಕಡೆಗಣಿಸಿರುವುದರಿಂದ ಬಿಜೆಪಿ ಸೋಲಿಗೆ ಕಾರಣ ಎಂಬ ವದಂತಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಿ, ಯಡಿಯೂರಪ್ಪ ಅವರನ್ನು ಪಕ್ಷ ಎಂದೂ ಕಡೆಗಣಿಸಿಲ್ಲ, ಕಡೆಗಣಿಸುವುದಿಲ್ಲ ಕೇವಲ ಯಾರೋ ವದಂತಿಗಳನ್ನು ಹರಡುತ್ತಿದ್ದಾರೆ. ಯಡಿಯೂರಪ್ಪ ಅವರು ಸಹ ಎಂದೂ, ಎಲ್ಲೂ ನನ್ನನ್ನು ಕಡೆಗಣಿಸಿದ್ದಾರೆಂದು ಹೇಳಿಕೊಂಡಿಲ್ಲ, ಇನ್ನೂ ನನಗೆ ಪಕ್ಷ ಎಲ್ಲವನ್ನೂ ನೀಡಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಎಂದು ತಿಳಿಸಿದರು.
ಹೊಸಕೋಟೆ ಮಿನಿ ಬಿಹಾರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಲ್ಲಿನ ವಾತಾವರಣ, ನಡೆದಂತಹ ಘಟನೆ ನೋಡಿ ಈ ರೀತಿ ನಮ್ಮ ನಾಯಕರು ಹೇಳಿಕೆ ನೀಡಿದ್ದಾರೆ. ಒಬ್ಬ ಬಿಜೆಪಿ ಕಾರ್ಯಕರ್ತನ ಕೊಲೆ ಆಗಿದೆ, ಇನ್ನೂ ಸಾಮಾನ್ಯ ಜನರ ಗತಿ ಏನು? ಎಂದು ಪಶ್ನೆ ಮಾಡಿದರು. ಎಂಟಿಬಿ ಅಧಿಕಾರದಲ್ಲಿದ್ದಾಗ ಅಲ್ಲಿ ಶಾಂತಿಯಿಂದ ಜನ ಜೀವನ ಮಾಡುತ್ತಿದ್ದರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಕಾರ್ಯಕರ್ತನ ಕೊಲೆ ಆಗಿದೆ ಇದನ್ನು ತೀವ್ರವಾಗಿ ಖಂಡಿಸಿ ಕೊಲೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಈ ವೇಳೆ ಬಿಜೆಪಿ ಗ್ರಾಮಾಂತರ ಅಧ್ಯಕ್ಷ ನಾಗೇಶ್, ನಗರ ಅಧ್ಯಕ್ಷ ಮುದ್ದಪ್ಪ, ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಬಿ.ಸಿ.ನಾರಾಯಣ ಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.