ಆಪರೇಷನ್ ಕಮಲದ ಮೂಲಕ ತಾಲೂಕಿನ ಸಾಸಲು ಗ್ರಾಮ ಪಂಚಾಯಿತಿಯನ್ನ ತೆಕ್ಕೆಗೆ ತೆಗೆದುಕೊಂಡು ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.
ಸಾಸಲು ಗ್ರಾಮ ಪಂಚಾಯ್ತಿಯಲ್ಲಿ ಕೇವಲ ಐವರು ಬಿಜೆಪಿ ಬೆಂಬಲಿತ ಸದಸ್ಯರಿದ್ದರೂ ಗ್ರಾಮ ಪಂಚಾಯ್ತಿ ಎರಡನೇ ಅವಧಿಗೆ ನಡೆದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರಾಗಿದ್ದ ಆರು ಸದಸ್ಯರನ್ನು ಆಪರೇಷನ್ ಕಮಲದ ಮೂಲಕ ಸೆಳೆದು ಅಧಿಕಾರ ಹಿಡಿದಿದ್ದಾರೆ.
ಒಟ್ಟು 16 ಸದಸ್ಯರಿರುವ ಸಾಸಲು ಗ್ರಾಮ ಪಂಚಾಯ್ತಿಯಲ್ಲಿ ನೂತನ ಅಧ್ಯಕ್ಷರಾಗಿ ನಂದಿನಿ ಎನ್. ಪ್ರಸನ್ನಕುಮಾರ್ ಅವರು ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಲಕ್ಷ್ಮಿದೇವಮ್ಮ ಬಸವರಾಜು ಅವರು ಅವಿರೊಧವಾಗಿ ಆಯ್ಕೆಯಾದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಸುಶೀಲಮ್ಮ ಅವರು ಚುನಾವಣಾಧಿಕಾರಿಯಾಗಿ, ಪಿಡಿಒ ತಿರುಪತಿ ಅವರು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಂದಿನಿ ಆರ್. ಪ್ರಸನ್ನ ಹಾಗೂ ಲಕ್ಷ್ಮಿದೇವಮ್ಮ ಮಾತ್ರ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಗಳು ಅಗತ್ಯ ಬಹುಮತ ವೀಕ್ಷಿಸಿ ಅವಿರೋಧ ಆಯ್ಕೆ ಪ್ರಕಟಿಸಿದರು.
ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಘೊಷಣೆ ಬೆನ್ನಲ್ಲೇ ಬಿಜೆಪಿ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಗ್ರಾಮ ಪಂಚಾಯ್ತಿಯಲ್ಲಿ ಒಟ್ಟು ಬಿಜೆಪಿ 5, ಕಾಂಗ್ರೆಸ್ 10, ಜೆಡಿಎಸ್ ಬೆಂಬಲಿತ ಒಬ್ಬರು ಸದಸ್ಯರಿದ್ದರು. ಚುನಾವಣಾ ಪ್ರಕ್ರಿಯೆಗೆ ಜೆಡಿಎಸ್ ಬೆಂಬಲಿತ ಒಬ್ಬರು, ಕಾಂಗ್ರೆಸ್ ಬೆಂಬಲಿತ ನಾಲ್ವರು ಗೈರು ಹಾಜರಾಗಿದ್ದರು.