ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಪುಟ್ಟಣ್ಣ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ ವಿರುದ್ಧ ಗೆಲುವು ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಪುಟ್ಟಣ್ಣ ಅವರು ಪ್ರತಿ ಸುತ್ತಿನಲ್ಲೂ ಮುನ್ನಡೆ ಸಾಧಿಸಿ ಗೆಲುವಿನ ದಡ ಮುಟ್ಟಿದರು. ಎ.ಪಿ.ರಂಗನಾಥ ಅವರು 1507 ಮತಗಳ ಅಂತರದಿಂದ ಪರಾಜಿತಗೊಂಡರು.
ಬೆಂಗಳೂರು ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಶಿಕ್ಷಕ ಮತದಾರರು ಹಕ್ಕು ಚಲಾಯಿಸಿದ್ದರು.
ಪುಟ್ಟಣ್ಣ ಅವರು 8260 ಮತಗಳನ್ನು ಪಡೆದರೆ, ಎ.ಪಿ. ರಂಗನಾಥ್ ಅವರು 6753 ಮತಗಳನ್ನು ಪಡೆದರು ಎನ್ನಲಾಗಿದೆ.
ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ವಿಜಯೋತ್ಸವ ಆಚರಿಸಿದರು. ಅಧಿಕೃತ ಫಲಿತಾಂಶ ಇನ್ನಷ್ಟೇ ಹೊರಬೀಳಲಿದೆ.