ಸಿಎಂ ಹುದ್ದೆಯಿಂದ ಹಿಡಿದು ಪಕ್ಷದ ಟಿಕೆಟ್ ವರೆಗೆ ಎಲ್ಲವನ್ನೂ ಮಾರಾಟಕ್ಕಿಟ್ಟಿರುವ ಬಿಜೆಪಿ ಒಂಥರಾ ಚೋರ್ ಬಜಾರ್ ಇದ್ದಂತೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬಿಜೆಪಿ ಕಚೇರಿ ಎಂದರೆ ವಂಚಕರ ಅಡ್ಡೆ ಎಂಬುದಕ್ಕೆ ಮತ್ತೊಂದು ಟಿಕೆಟ್ ವಂಚನೆ ಪ್ರಕರಣ ಹೊರಬಂದಿರುವುದೇ ಸಾಕ್ಷಿ. ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಅಕ್ರಮವಾದರೆ, ಪಕ್ಷದಲ್ಲಿ ಟಿಕೆಟ್ ಕಮಿಷನ್ ಅಕ್ರಮ, ಈ ಕಮಿಷನ್ ಸೋಂಕು ಬಿಜೆಪಿಯಿಂದ ಸರ್ಕಾರಕ್ಕೆ ಅಂಟಿದೆಯೋ? ಅಥವಾ ಬಿಜೆಪಿ ಸರ್ಕಾರದಿಂದ ಪಕ್ಷಕ್ಕೆ ಅಂಟಿದೆಯೋ? ಕಂಡವರನ್ನು ಕಾಣೆಯಾಗಿದ್ದಾರೆ ಎನ್ನುವ ಕುರುಡು ಬಿಜೆಪಿ ತಮ್ಮ ಪಕ್ಷದ ವಸೂಲಿ ಅಕ್ರಮಗಳ ಬಗ್ಗೆಯೂ ಕುರುಡಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಸೋಲು ಖಾತರಿಯಾಗುತ್ತಿದ್ದಂತೆಯೇ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಹೊಸಬರಿಗೆ ಮಣೆ ಹಾಕುವ “ಗುಜರಾತ್ ಮಾದರಿ” ಎಂದು ಬಣ್ಣ ಬದಲಿಸಿದ್ದು ಬಹುಶಃ ಟಿಕೆಟ್ ಮಾರಾಟಕ್ಕಾಗಿಯೇ ಇರಬಹುದು.
ಈ ಬಗ್ಗೆ “ಸಂತೋಷ”ದಿಂದಿರುವವರೇ ಸ್ಪಷ್ಟಪಡಿಸಬೇಕು. ಕಮಿಷನ್ ಎನ್ನುವುದು ಬಿಜೆಪಿಯ ಜೀವಾಳ, ಗುತ್ತಿಗೆದಾರರೇ ಆಗಿರಲಿ, ಟಿಕೆಟ್ ಆಕಾಂಕ್ಷಿಗಳೇ ಆಗಿರಲಿ, ಕಮಿಷನ್ ನೀಡಲೇಬೇಕು. ಏಕೆಂದರೆ ಜಗನ್ನಾಥ ಭವನ ಎಂಬುದು ‘ಕೇಶವ ಕೃಪಾ’ ಪೋಷಿತ ಸುಂಕ ವಸೂಲಿ ಮಾಡುವ ‘ಸುಂಕದ ಕಟ್ಟೆ’ ಎಂದಿದ್ದಾರೆ.