
ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮಕ್ಕೆ ಕಡೆಗೂ ತೆರೆಬಿದ್ದಿದೆ. ಸಾಕಷ್ಟು ಪ್ರೇಕ್ಷಕರ ನಿರೀಕ್ಷೆಯಂತೆ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ.
‘ಬಿಗ್ ಬಾಸ್’ ಮನೆಯೊಳಗೆ ಗಿಲ್ಲಿ ಕಾಲಿಟ್ಟಿದ್ದು ಕಾವ್ಯ ಜೊತೆ ಜಂಟಿಯಾಗಿ. ‘ಬಿಗ್ ಬಾಸ್’ ಮನೆಯೊಳಗೆ ಜಂಟಿಯಾಗಿ ಹೋದರೂ ಸಿಂಗಲ್ ಆಗಿ ಇಡೀ ಸೀಸನ್ ಡಾಮಿನೇಷನ್ ಮಾಡಿದವರು ಗಿಲ್ಲಿ ನಟ.
ಗಿಲ್ಲಿ ನಟನ ಕಾಮಿಡಿ ಟೈಮಿಂಗ್, ಸಂದರ್ಭೋಚಿತ ಕಾಮಿಡಿ, ಪಂಚಿಂಗ್ ಲೈನ್ಸ್ ಸಿಕ್ಕಾಪಟ್ಟೆ ವರ್ಕೌಟ್ ಆಗಿತ್ತು. ತಮ್ಮ ಕಾಮಿಡಿಯಲ್ಲಿ ಸಿಲ್ಲಿ ಜೋಕ್ಸ್‌ನ ಗಿಲ್ಲಿ ಎಂದೂ ಮಿಕ್ಸ್ ಮಾಡಲಿಲ್ಲ. ಡಬಲ್ ಮೀನಿಂಗ್ ಅಥವಾ ಅಶ್ಲೀಲತೆಯನ್ನ ಸೋಕಿಸಲೂ ಇಲ್ಲ. ಇಡೀ ಫ್ಯಾಮಿಲಿ ಕೂತು.. ಎಲ್ಲರೂ ಹೊಟ್ಟೆ ತುಂಬಾ ನಗುವಂತೆ ಮಾಡಿದವರು ಗಿಲ್ಲಿ ನಟ. ಇದೇ ಕಾರಣಕ್ಕೆ ‘ಗಿಲ್ಲಿ ಗೆಲ್ಲಬೇಕು’ ಅಂತ ಬಹುತೇಕರು ಬಯಸಿದ್ದರು. ವೀಕ್ಷಕರು ಅಂದುಕೊಂಡಂತೆ ಗಿಲ್ಲಿ ನಟ ವಿಜಯಪತಾಕೆ ಹಾರಿಸಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ”ಬಿಗ್ ಬಾಸ್ ಕನ್ನಡ 12’ ಸ್ವಯಂಘೋಷಿತ ವಿನ್ನರ್ ಗಿಲ್ಲಿ” ಅಂತ ಕೆಲವರು ಕಾಲೆಳೆಯುತ್ತಿದ್ದರು. ಅದಕ್ಕೆ ”ಡಮಾಲ್ ಡಿಮಿಲ್ ಡಕ್ಕ.. ಗಿಲ್ಲಿ ಗೆಲ್ಲೋದು ಪಕ್ಕಾ.. ಟಕರ ಟಕರ ತಮಟೆ ಏಟು.. ಗಿಲ್ಲಿ ನಟ ಅಲ್ಟಿಮೇಟು” ಎಂದು ಗಿಲ್ಲಿ ನಟ ತಿರುಗೇಟು ನೀಡುತ್ತಿದ್ದರು. ಈಗ ವೀಕ್ಷಕರಿಂದ ಅತೀ ಹೆಚ್ಚು ಮತಗಳನ್ನ ಪಡೆದು ಗಿಲ್ಲಿ ನಟ ಜಯಭೇರಿ ಬಾರಿಸಿದ್ದಾರೆ.
ಗೆದ್ಮೇಲೆ ”ನಿಜವಾಗಿಯೂ ಸಖತ್ ಖುಷಿಯಾಗುತ್ತಿದೆ. ಗೆದ್ದಿದ್ದೇನೆ.. ಗೆದ್ದಾಗ ಹಿಗ್ಗಲ್ಲ, ಸೋತಾಗ ಕುಗ್ಗಲ್ಲ. ನಿಮ್ಮ ಆಶೀರ್ವಾದ ಯಾವಾಗಲೂ ಹೀಗೇ ಇರಲಿ” ಎಂದಿದ್ದಾರೆ ಗಿಲ್ಲಿ ನಟ. ಜೊತೆಗೆ, ”ನನಗೆ ಒಳಗೆ ರಜತ್, ಕಾವ್ಯ, ರಕ್ಷಿತಾ, ರಘು ತುಂಬಾ ಸಪೋರ್ಟ್ ಮಾಡಿದರು. ಇದನ್ನ ನಾನು ನನ್ನ ಜೀವನದಲ್ಲಿ ಮರೆಯೋದಿಲ್ಲ” ಎಂದು ಗಿಲ್ಲಿ ನಟ ನೆನೆದರು.
ಹಾಗ್ನೋಡಿದ್ರೆ, ಈ ಹಿಂದೆ 5 ರಿಯಾಲಿಟಿ ಶೋಗಳಲ್ಲಿ ಗಿಲ್ಲಿ ನಟ ಸ್ಪರ್ಧಿಸಿದ್ದರು. ಕೆಲವು ಶೋಗಳಲ್ಲಿ ಫೈನಲಿಸ್ಟ್ ಆಗಿದ್ದರೆ, ಕೆಲವೊಂದರಲ್ಲಿ ರನ್ನರ್ ಅಪ್ ಆಗಿದ್ದರು. ಈವರೆಗೂ ಯಾವ ಶೋನಲ್ಲೂ ಗಿಲ್ಲಿ ನಟ ಗೆದ್ದಿರಲಿಲ್ಲ. ಗಿಲ್ಲಿ ನಟನಿಗೆ ಗೆಲುವಿನ ಸಿಹಿ ನೀಡಿರೋದು ‘ಬಿಗ್ ಬಾಸ್’. ಈ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ”5 ರಿಯಾಲಿಟಿ ಶೋ ನಂತರ ಫೈನಲಿ.. ‘ಬಿಗ್ ಬಾಸ್’ ಎಂಬ ದೊಡ್ಡ ರಿಯಾಲಿಟಿ ಶೋಗೆ ಬಂದು ದೊಡ್ಡ ಮಟ್ಟದಲ್ಲಿ ಗಿಲ್ಲಿ ಗೆಲುವಿನ ನಗೆ ಬೀರಿದ್ದಾರೆ” ಎಂದರು. ಹಾಗೇ, ”ಇದು ವೆಲ್ ಡಿಸರ್ವ್ಡ್ ಗೆಲುವು” ಎಂದು ಗಿಲ್ಲಿ ನಟನ ಬೆನ್ನು ತಟ್ಟಿದರು ಕಿಚ್ಚ ಸುದೀಪ್.
‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಗಿಲ್ಲಿ ನಟನಿಗೆ ಪ್ರಾಯೋಜಕರ ಕಡೆಯಿಂದ 50 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ಬಿಗ್ ಬಾಸ್ ಅರಮನೆ ಥೀಮ್‌ನಲ್ಲಿಯೇ ಸಿದ್ಧಗೊಂಡಿರುವ ‘ಬಿಗ್ ಬಾಸ್ ಕನ್ನಡ 12 ವಿನ್ನರ್ ಟ್ರೋಫಿ’ಗೆ ಗಿಲ್ಲಿ ನಟ ಮುತ್ತಿಟ್ಟಿದ್ದಾರೆ. ಇದರ ಜೊತೆಗೆ ಮಾರುತಿ ಸುಜುಕಿ ಕಡೆಯಿಂದ ವಿಕ್ಟೋರಿಸ್ ಕಾರು ಗಿಲ್ಲಿ ನಟನ ಕೈಸೇರಿದೆ.
ಕಿಚ್ಚ ಸುದೀಪ್ ಕಡೆಯಿಂದಲೂ ಪ್ರೀತಿಯ ಬಹುಮಾನ
ಪ್ರಾಯೋಜಕರ ಕಡೆಯಿಂದ ಮಾತ್ರವಲ್ಲ.. ಕಿಚ್ಚ ಸುದೀಪ್ ಕಡೆಯಿಂದಲೂ ಗಿಲ್ಲಿ ನಟನಿಗೆ ಬಹುಮಾನ ಹಣ ಲಭಿಸಿದೆ. ಕಿಚ್ಚ ಸುದೀಪ್ ಮನಗೆದ್ದಿರುವ ಗಿಲ್ಲಿ ನಟನಿಗೆ ಬಹುಮಾನ ಹಣ ಘೋಷಿಸಿದ್ದಾರೆ. ”ಗಿಲ್ಲಿ ಅದ್ಭುತವಾಗಿ ಆಡಿದ್ದಾರೆ. ಈ ವೇದಿಕೆಯಲ್ಲಿ ನನ್ನ ಕಡೆಯಿಂದ ಗಿಲ್ಲಿಗೆ ನಾನು ಪ್ರೀತಿಯಿಂದ 10 ಲಕ್ಷ ರೂಪಾಯಿ ಕೊಡುತ್ತಿದ್ದೇನೆ” ಎಂದು ಕಿಚ್ಚ ಸುದೀಪ್ ಅನೌನ್ಸ್ ಮಾಡಿದರು