ಬಿಎಸ್‌ಎನ್‌ಎಲ್ ಸಂಸ್ಥೆಯಂತೆ ಬಮೂಲ್ ನಷ್ಟಕ್ಕೆ ಒಳಗಾಗುವ ಆತಂಕ: ಅಧಿಕಾರಿಗಳ ವಿರುದ್ಧ ರೈತರು ಗರಂ

ನಾಡಿನ ರೈತರು ಕಟ್ಟಿ ಬೆಳೆಸಿದ ‘ಬಮೂಲ್’ ಅಧಿಕಾರಿಗಳ ಸ್ವಾರ್ಥದಿಂದ ಮತ್ತೊಂದು ಬಿಎಸ್‌ಎನ್‌ಎಲ್ ಸಂಸ್ಥೆಯಂತೆ ನಷ್ಟಕ್ಕೆ ಒಳಗಾಗುವ ಆತಂಕವನ್ನು ರೈತರು ವ್ಯಕ್ತಪಡಿಸಿ, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ, ಡೈರಿ ಕಾರ್ಯದರ್ಶಿಗಳ ಸಂಘದ ಪದಾಧಿಕಾರಿಳು ನಗರದ ಬಮೂಲ್ ಶೀತಲೀಕರಣ ಘಟಕಕ್ಕೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ರೈತ ಮುಖಂಡರು, ಭೀಕರ ಬರಗಾಲ, ತೀವ್ರವಾದ ಬೇಸಿಗೆ, ಹಸಿ ಮೇವಿನ ಕೊರತೆಯಿಂದಾಗಿ ಹಾಲಿನ ಗುಣಮಟ್ಟ ಸ್ವಾಭಾವಿಕವಾಗಿ ಕಡಿಮೆಯಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಕಾಲು ಬಾಯಿ ರೋಗಕ್ಕೆ ನಿರೋಧಕವಾಗಿ ಇಂಜೆಕ್ಷನ್ ಮಾಡಿಸಲಾಗಿರುವುದು ಕೂಡ ಹಾಲಿನ ಗುಣಮಟ್ಟ ಕಡಿಮೆಯಾಗಲು ಕಾರಣವಾಗಿದೆ.

ರೈತರು ಎದುರಿಸುತ್ತಿರುವ ಈ ಸಮಸ್ಯೆಯನ್ನು ಅರಿಯದ ಅಧಿಕಾರಿಗಳು 8.4 ಎಸ್‌ಎನ್‌ಎಫ್ ಬಂದರೆ ಹಾಲುನ್ನು ತಿರಸ್ಕರಿಸುತ್ತಿದ್ದಾರೆ. ಇದರಿಂದ ರೈತರಿಗೆ ಸರ್ಕಾರದಿಂದ ದೊರೆಯುವ ರೂ.5 ಸಹಾಯ ಧನ ದೊರೆಯುತ್ತಿಲ್ಲ‌.

ಅಲ್ಲದೆ, ಗುಣಮಟ್ಟದ ನೆಪವೊಡ್ಡಿ ಪ್ರತಿ ದಿನ ತಾಲೂಕಿನ ಮೂರ್ ನಾಲ್ಕು ಡೈರಿಗಳಿಗೆ ನೋ ಪೇಮೆಂಟ್ ಮಾಡುತ್ತಿದ್ದು, ಹಾಲು ಉತ್ಪಾದಕ ಸಹಕಾರ ಸಂಘಗಳು, ರೈತರು ನಷ್ಟಕ್ಕೆ ಒಳಗಾಗುತ್ತಿದ್ದಾರೆ.

ಈ ಕುರಿತು ಪ್ರಶ್ನಿಸಿದರೆ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಿದ್ದು, ಇಂತಹ ಬೇಜವಾಬ್ದಾರಿಯುತ ಅಧಿಕಾರಿಗಳಿಂದಾಗಿ ಸರ್ಕಾರಿ ಸಂಸ್ಥೆಗಳು ನಷ್ಟಕ್ಕೆ ಒಳಗಾಗಿ, ಖಾಸಗಿ ಸಂಸ್ಥೆಗಳು ಲಾಭ ಪಡೆಯಲು ಪರೋಕ್ಷವಾಗಿ ಕಾರಣವಾಗುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಸತೀಶ್, ಮುತ್ತೇಗೌಡ, ಶಿರವಾರ ರವಿ, ಮುನಿ ನಾರಾಯಣಪ್ಪ, ವಾಸು, ಕಾರ್ಯದರ್ಶಿ ಸಂಘದ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಮಂಜುನಾಥ್, ದೇವರಾಜ್, ವೀರಣ್ಣ, ಚನ್ನೇಗೌಡ ಮತ್ತಿತರರಿದ್ದರು.

Leave a Reply

Your email address will not be published. Required fields are marked *