ಬಿಎಂಟಿಸಿ ಬಸ್ ನಲ್ಲಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸಿಟಿ ರೌಂಡ್ಸ್ ಮಾಡಿದರು.
ಬೆಂಗಳೂರಿನ ಶಿವಾಜಿನಗರದಿಂದ- ದೇವನಹಳ್ಳಿ,ಕಾಕ್ಸ್ ಟೌನ್, ಇಂಡಿಯನ್ ಎಕ್ಸ್ ಪ್ರೆಸ್ ವರೆಗೆ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿ ಪ್ರಯಾಣಿಕರ ಕುಂದುಕೊರತೆಗಳನ್ನು ಆಲಿಸಿದರು.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಸಾರ್ವಜನಿಕ ಬಸ್ ನಲ್ಲಿ ಪ್ರಯಾಣಿಸಿ ಮಹಿಳೆಯರ ಸುರಕ್ಷತೆ ಬಗ್ಗೆ ಗಮನಹರಿಸಿದ್ದೇವೆ. ಮಹಿಳೆಯರ ಸುರಕ್ಷತೆ ನಮ್ಮ ಮೊದಲ ಆದ್ಯತೆಯಾಗಿದೆ. ಪ್ರಯಾಣದ ವೇಳೆ ಮಹಿಳೆಯರಿಗೆ ತೊಂದರೆಯಾದಾಗ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂಬ ಅರಿವು ಮೂಡಿಸಲಾಗಿದೆ. ಸೇಫ್ಟಿ ಐ ಲ್ಯಾಂಡ್ ಗಳಲ್ಲಿ ಪ್ಯಾನಿಕ್ ಬಟನ್ ಬಳಸೋದು ಹೇಗೆ.. ತೊಂದರೆಯಾದಾಗ 112 ಕರೆ ಮಾಡೋದು.. ಸುರಕ್ಷಾ ಆಪ್ ಬಳಕೆ ಮಾಡುವ ವಿಧಾನ, ಹೀಗೆ ಹಲವು ಮಾಹಿತಿಯನ್ನ ಮಹಿಳೆಯರಿಗೆ ನೀಡಿದ್ದೇವೆ ಎಂದರು.
ಸಾರ್ವಜನಿಕರು ಸಮಸ್ಯೆ ತಗೆದುಕೊಂಡು ನಮ್ಮ ಬಳಿ ಬರೋದಕ್ಕಿಂತ ನಾವೇ ಅವರ ಬಳಿ ಹೊಗೋದು ಒಳ್ಳೆಯದು. ಹೀಗಾಗಿ ಇಂದು ನಗರದ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಬೆಳೆಸಿ ಅರಿವು ಮೂಡಿಸಿದ್ದೇವೆ ಎಂದು ತಿಳಿಸಿದರು.