ನೆಲಮಂಗಲದಿಂದ ಯಶವಂತಪುರ ಕಡೆ ಬರುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಡ್ರೈವರ್ ಕಿರಣ್ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಹಾಗೇ ನರಳಾಡಿದ ಕಿರಣ್ ತಕ್ಷಣವೇ ಡ್ರೈವರ್ ಸೀಟ್‌ನಿಂದ ಕುಸಿದು ಬೀಳುತ್ತಾ ಇದ್ದರು. ಇದನ್ನು ಗಮನಿಸಿದ ಕಂಡಕ್ಟರ್ ಓಬಳೇಶ್ ಸಂಚರಿಸುತ್ತಿದ್ದ ಬಸ್ನ್ನು ನಿಲ್ಲಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ. ಬಸ್‌ನಲ್ಲಿದ್ದ 50ಕ್ಕೂ ಹೆಚ್ಚು ಪ್ರಯಾಣಿಕರು ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾಸನ ಮೂಲದ ಚಾಲಕ ಕಿರಣ್‌ಕುಮಾರ್ (40) ಮೃತ ಚಾಲಕ. ಇಂದು (ನವೆಂಬರ್ 06) ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಡಿಪೋಗೆ ಸೇರಿದ ಬಸ್ ಡ್ರೈವ್ ಮಾಡಿಕೊಂಡು ಹೋಗುತ್ತಿರುವಾಗಲೇ ಏಕಾಏಕಿ ಹೃದಯಾಘಾತವಾಗಿದೆ.
ಬಿಎಂಟಿಸಿ ಡ್ರೈವರ್ ಕಿರಣ್ ಅವರಿಗೆ ಹೃದಯಾಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡ್ರೈವಿಂಗ್ ವೇಳೆ ಚಾಲಕ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪಿದ್ದಾರೆ. ಪ್ರಾಣ ಬಿಟ್ಟ ಡ್ರೈವರ್‌ಗೆ ಇನ್ನೂ 39 ವರ್ಷ ವಯಸ್ಸಾಗಿತ್ತು ಅಷ್ಟೇ. ಹೃದಯಾಘಾತದ ಸಂದರ್ಭದಲ್ಲೂ ಕಿರಣ್ ಅವರು ಬಸ್ ನಿಲ್ಲಿಸಲು ಪ್ರಯತ್ನ ಪಟ್ಟಿದ್ದಾರೆ. ಕಂಡಕ್ಟರ್ ಸಮಯ ಪ್ರಜ್ಞೆಯಿಂದ ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.
ಬಿಎಂಟಿಸಿ ಕಂಡಕ್ಟರ್ ಓಬ್ಳೇಶ್ ಅವರ ಈ ಸಾಹಸ ಮತ್ತು ಸಮಯಪ್ರಜ್ಞೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. BMTC ಮುಖ್ಯ ಸಂಚಾರ ವ್ಯವಸ್ಥಾಪಕರಾದ ಜಿ.ಟಿ ಪ್ರಭಾಕರ್ ರೆಡ್ಡಿ ಅವರು ಪ್ರಯಾಣಿಕರ ಜೀವ ಉಳಿಸಿದ ಕಂಡಕ್ಟರ್‌ಗೆ ಬಹುಮಾನ ಘೋಷಣೆ ಮಾಡಿದ್ದಾರೆ..