ಕೈಗಾರಿಕಾ ಪ್ರದೇಶದ ಕೇಂದ್ರ ಬಿಂದುವಾಗಿರುವ ಬಾಶೆಟ್ಟಿಹಳ್ಳಿ ವೃತ್ತದಲ್ಲಿ ಬಸ್ ನಿಲ್ದಾಣಗಳ ಶೆಲ್ಟರ್ ನಿರ್ಮಾಣ ಅತ್ಯಗತ್ಯವಾಗಿದೆ. ಸ್ಮಶಾನಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ವಿವಿಧ ಸಮುದಾಯಗಳ ಕಲ್ಯಾಣಕ್ಕಾಗಿ ಮೀಸಲಿಟ್ಟಿರುವ ಹಣ ಸಾಲದು, ಮತ್ತಷ್ಟು ಹೆಚ್ಚಿಸಬೇಕು ಎಂದು ಅಂಬರೀಶ್ ಆಗ್ರಹಿಸಿದರು.
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ 2025-26ನೇ ಸಾಲಿನ ಆಯ-ವ್ಯಯಕ್ಕೆ ಸಂಬಂಧಿಸಿ ಸಾರ್ವಜನಿಕರ ಪೂರ್ವಭಾವಿ ಸಭೆ ಮಂಗಳವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಳೆಗಾಲಕ್ಕೂ ಮುನ್ನವೇ ಈ ಬಾರಿಯ ಬೇಸಿಗೆಯಲ್ಲಿ ರಾಜಕಾಲುವೆಗಳ ಒತ್ತುವರಿ ತೆರವು ಮತ್ತು ಸ್ವಚ್ಚತೆಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ದಿನೇ ದಿನೇ ಪಟ್ಟಣ ಪಂಚಾಯತಿ ಬೆಳೆಯುತ್ತಿರುವುದರಿಂದ ನಗರಕ್ಕೆ ಯುಜಿಡಿ ಅನುಷ್ಠಾನ ಅಗತ್ಯ ಇದೆ. ಹೀಗಾಗಿ ಯುಜಿಡಿ ಯೋಜನೆಗೆ ಹಣ ಮೀಸಲಿಟ್ಟು ಜಾರಿಗೊಳಿಸಬೇಕು ಎಂದು ಬೇಡಿಕೆ ಇಟ್ಟರು.
ಬಾಶೆಟ್ಟಿಹಳ್ಳಿ ವಿಎಸ್ಎಸ್ಎನ್ ಅಧ್ಯಕ್ಷ ಸಿ. ನಾರಾಯಣಸ್ವಾಮಿ ಮಾತನಾಡಿ ಬಾಶೆಟ್ಟಿಹಳ್ಳಿ ಪಂ.ಪ ವ್ಯಾಪ್ತಿಯಲ್ಲಿ ಬೆರಳೆಣಿಕೆಯಷ್ಟು ಕೆರೆಗಳು ಮಾತ್ರ ಉಳಿದಿವೆ. ಉಳಿದಿರುವ ಕೆರೆಗಳಿಗೂ ಕೈಗಾರಿಕೆಗಳ ತ್ಯಾಜ್ಯ ನೀರು ಹರಿಯುತ್ತಿವೆ. ಇದರಿಂದ ಕೆರೆಗಳಲ್ಲಿ ಮೀನುಗಳು ಸಾವನ್ನಪ್ಪಿ ಕೆರೆಗಳೇ ಇಲ್ಲದಂತಾಗುತ್ತದೆ. ಕೆರೆಗಳು ಮತ್ತು ರಾಜಕಾಲುವೆಗಳು ಸೇರಿದಂತೆ ಪಟ್ಟದ ಮುಖ್ಯರಸ್ತೆಗಳಲ್ಲಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ತೆಗೆದುಕೊಂಡು ತೆರವು ಕಾರ್ಯಾಚರಣೆಯನ್ನ ಆರಂಭಿಸಬೇಕು ಎಂದರು. ಇದಕ್ಕೆ ಉತ್ತರಿಸಿದ ಪ.ಪಂ ಮುಖ್ಯಾಧಿಕಾರಿ ಪಿ.ನರಸಿಂಹಮೂರ್ತಿ ಕೆರೆಯ ಸುತ್ತಮುತ್ತಲಿನ ಎಲ್ಲಾ ಕಂಪನಿ, ಕಾರ್ಖಾನೆ, ಫ್ಯಾಕ್ಟರಿಗಳಿಗೆ ನೋಟಿಸ್ ನೀಡಿ ಶೀಘ್ರವಾಗಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ರಸ್ತೆಗಳ ಪಕ್ಕದಲ್ಲಿ ಒತ್ತುವರಿ ತೆರವಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು.
ಅತಿಮುಖ್ಯ ಆಗ್ರಹ
1. ಬ್ಯಾಂಕ್ ಸರ್ಕಲ್ ನಲ್ಲಿನ ಪುಟ್ ಪಾತ್ ನಲ್ಲಿ ಗ್ರಿಲ್ಸ್ ಅಳವಡಿಸುವುದು.
2. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಮಶಾನಗಳಿಗೆ ಕಾಂಪೌಂಡ್ ನಿರ್ಮಾಣ
3. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಹಾದುಹೋಗಿರುವ ಬೆಂಗಳೂರು-ಹಿಂದೂಪುರ ಹೆದ್ದಾರಿ ರಸ್ತೆಯಲ್ಲಿ ಪಂಚಾಯತಿ ವತಿಯಿಂದ ಸ್ವಾಗತ ಮತ್ತು ಧನ್ಯವಾದ ಕಮಾನುಗಳ ನಿರ್ಮಾಣ
4. ನೂತನವಾಗಿ ವಾಣಿಜ್ಯ ಮಳಿಗೆಗಳ ನಿರ್ಮಾಣ
5. ಬಾಶೆಟ್ಟಿಹಳ್ಳಿ ಕೆರೆಯನ್ನ ಅಭಿವೃದ್ಧಿಪಡಿಸಿ, ವಾಕಿಂಗ್ ಟ್ರ್ಯಾಕ್ ಮತ್ತು ವಿಶ್ರಾಂತಿ ಚೇರ್ ಗಳನ್ನ ಹಾಕುವುದು.
6. ಅರಣ್ಯೀಕರಣ ಮಾಡಿ ಮರಗಳನ್ನ ಹಾಕುವುದು.
7. ರಸ್ತೆ ಬದಿಗಳಲ್ಲಿನ ಒತ್ತುವರಿ ತೆರವು ಕಾರ್ಯ ಮಾಡಿ ಕಠಿಣ ಕ್ರಮಗಳನ್ನ ತೆಗೆದುಕೊಳ್ಳಬೇಕು.
8. ಬೀದಿ ಬದಿ ವ್ಯಾಪಾರಿಗಳ ಗಣತಿ ಮಾಡಿ ಸುಂಕ ವಸೂಲಿ ಕ್ರಮ ಜರುಗಿಸಬೇಕು.
9. ಕೆರೆಗಳಿಗೆ ಮುಳ್ಳುತಂತಿ ಹಾಕಿ ಫೆನ್ಸಿಂಗ್ ಮಾಡಿ, ಶಾಲಾ ವಿದ್ಯಾರ್ಥಿಗಳಿಗೆ ಮೈದಾನ ನಿರ್ಮಾಣ.
10. ಲಾರಿಗಳು ರಸ್ತೆಯಲ್ಲಿ ಪಾರ್ಕ್ ಮಾಡಲಾಗುತ್ತಿದೆ. ಇದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಲಾರಿಗಳ ತೆರವಿಗೆ ಕಂಪನಿಗಳ ವಿರುದ್ಧ ಕ್ರಮಕ್ಕೆ ನೀತಿ.
11. ಪ್ರತಿ ಗ್ರಾಮಗಳಿಗೂ ಚರಂಡಿ, ರಸ್ತೆ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳು….
ಈ ವೇಳೆ ಲೆಕ್ಕಾಧಿಕಾರಿ ಪಾಂಶುಶಿಂಧೆ, ಎಫ್.ಡಿ.ಎ ಮೇಘನಾ, ಉಮಾಶಂಕರ್, ಮುಖಂಡರಾದ ಕೃಷ್ಣಪ್ಪ, ಪ್ರೇಮಕುಮಾರ್, ಸಿ ನಾರಾಯಣಸ್ವಾಮಿ , ಮುನಿರಾಜು, ಮುನಿಚಂದ್ರ, ಅಂಬರೀಶ್, ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.