ಬಾಶೆಟ್ಟಿಹಳ್ಳಿ ಪ.ಪಂ ಬಜೆಟ್ ಪೂರ್ವಭಾವಿ ಸಭೆ ಅಪೂರ್ಣ; ಮುಖ್ಯಾಧಿಕಾರಿ ಕಾರ್ಯವೈಖರಿಗೆ ತೀವ್ರ ಅಸಮಾಧಾನಗೊಂಡ ಸಾರ್ವಜನಿಕರು

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ 2023ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮುನಿರಾಜು ವಿರುದ್ಧ ಸಾರ್ವಜನಿಕರ ಆಕ್ರೋಶಗೊಂಡ ಹಿನ್ನೆಲೆ ಅಪೂರ್ಣಗೊಂಡಿದೆ.

ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು ಗ್ರಾಮ ಪಂಚಾಯತಿಯಿಂದ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ಬಾಶೆಟ್ಟಿಹಳ್ಳಿ ಪ.ಪಂ ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯವಾಗಿದೆ. ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯ ಅಭಿವೃದ್ಧಿ ದೃಷ್ಟಿಯಿಂದ ಕರೆಯಲಾಗಿರುವ ಪೂರ್ವಭಾವಿ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಮಂದಿಯನ್ನು ಮಾತ್ರ ಆಹ್ವಾನ ನೀಡಲಾಗಿದೆ. ಸಂಘ-ಸಂಸ್ಥೆ, ಯುವ ಜನತೆ, ಸಾರ್ವಜನಿಕರಿಗೆ, ಮಾಧ್ಯಮದವರಿಗೆ ಮಾಹಿತಿಯೇ ಇಲ್ಲ. ಇಲ್ಲಿನ ಮುಖ್ಯಾಧಿಕಾರಿ ತಮ್ಮಿಷ್ಟದಂತೆ ನಡೆದುಕೊಳ್ಳುತ್ತಿದ್ದಾರೆ. ಬಜೆಟ್ ಅಂಕಿ-ಅಂಶಗಳು ಕೇವಲ ಬೋಗಸ್ ಯಾವುದೇ ಸ್ಪಷ್ಟತೆ ಇಲ್ಲ ಎಂದು ಕಿಡಿಕಾರಿದರು.

ಪಟ್ಟಣ ಪಂಚಾಯತಿಯಾಗಿ ಎರಡು ವರ್ಷ ಕಳೆದಿದೆ. ಕಳೆದ ಬಜೆಟ್ ನಲ್ಲಿ ಘೋಷಿಸಿದ ಯಾವುದೇ ಒಂದು ಯೋಜನೆ ಜಾರಿಯಾಗಿಲ್ಲ. ಕನಿಷ್ಠ ಮೂಲಭೂತ ಸೌಕರ್ಯಗಳ ಒದಗಿಸುವಲ್ಲಿಯೂ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಸುವನಹಳ್ಳಿ ಮುಖಂಡ ಅಂಬರೀಶ್ ಮಾತನಾಡಿ ಗ್ರಾಮ ಪಂಚಾಯತಿಯಾಗಿದ್ದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಗಾಂಧಿ ಪುರಸ್ಕಾರ, ನೈರ್ಮಲ್ಯ ರತ್ನ, ದೀನ್ ದಯಾಳ್ ಪ್ರಶಸ್ತಿ ಹೀಗೆ ಗ್ರಾಮ ಪಂಚಾಯತಿಗಳಿಗೆ ನೀಡಲಾಗುವ ಪ್ರತಿಯೊಂದು ವಿಭಾಗದಲ್ಲಿಯೂ ಸ್ಥಾನ ಪಡೆದು ಪ್ರಶಸ್ತಿ ಪಡೆದುಕೊಂಡಿತ್ತು. ಆದರೆ ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಇಲ್ಲಿನ ಸುತ್ತಮುತ್ತಲಿನ ಪ್ರದೇಶ ಸೇರಿ ನಮ್ಮ ಪಂಚಾಯತಿಯ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗುವ ನಿರೀಕ್ಷೆ ಇತ್ತು ಆದರೆ ಅಭಿವೃದ್ಧಿ ವೇಗ ಶೂನ್ಯಕ್ಕೆ ಇಳಿದಿದೆ ಎಂದರು.

ಬಜೆಟ್ ವಿಚಾರ ಜನರ ಗಮನಕ್ಕೆ ತಂದು ಸಿದ್ಧಪಡಿಸಬೇಕು. ಸಲಹೆ, ಸೂಚನೆಗಳನ್ನು ಪಡೆದುಕೊಂಡ ಸಿದ್ಧಪಡಿಸಬೇಕು, ಆದರೆ ಇಲ್ಲಿನ ಮುಖ್ಯಾಧಿಕಾರಿ ಮುನಿರಾಜು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದಾರೆ. ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಸ್ಥಾನಕ್ಕೆ ಕೆಎಎಸ್ ಅಧಿಕಾರಿಯಾಗಿರಬೇಕು. ಆದರೆ ಈಗಿರುವ ಅಧಿಕಾರಿ ಕೇವಲ ಕಂದಾಯ ನಿರೀಕ್ಷಕರಾಗಿದ್ದು, ಇದೀಗ ಪ್ರಮೋಷನ್ ಆಧಾರದ ಮೇಲೆ ಮುಖ್ಯಾಧಿಕಾರಿ ಕುರ್ಚಿಯಲ್ಲಿ ಕುಳಿತಿದ್ದಾರೆ ಎಂದು ಗುಡುಗಿದರು.

ಪ.ಪಂ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಈ ಅಧಿಕಾರಿಯನ್ನು ಒಂದು ವಾರದಲ್ಲಿ ಬದಲಾಯಿಸದಿದ್ದರೆ ಪಂಚಾಯತಿ ಮುಂಭಾಗ ಪ್ರತಿಭಟನೆ ಮಾಡಲಾಗುವುದು. ಈ ನಿರರ್ಥಕ ಬಜೆಟ್ ನಮಗೆ ಬೇಕಾಗಿಲ್ಲ ಎಂದು ಬಜೆಟ್ ಪ್ರತಿ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *