ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ: 8ನೇ ವಾರ್ಡ್ ಎಳ್ಳುಪುರ ಬಿಸಿಎಂ ಎ ಪಕ್ಷೇತರ ಅಭ್ಯರ್ಥಿಯಾಗಿ ರವಿಕುಮಾರ್ ಕೆ.ಎಂ ನಾಮಪತ್ರ ಸಲ್ಲಿಕೆ

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಡಿ.21 ರಂದು ನಡೆಯಲಿದ್ದು, ಇಂದು 33 ನಾಮಪತ್ರಗಳು ಸಲ್ಲಿಕೆಯಾಗಿವೆ.

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ 19 ವಾರ್ಡುಗಳಿವೆ. 1ರಿಂದ 10ನೇ ವಾರ್ಡ್‌ವರೆಗೆ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಾಮಪತ್ರ ಸಲ್ಲಿಸಲು ಹಾಗೂ 11ರಿಂದ 19ನೇ ವಾರ್ಡ್‌ವರೆಗೆ ಅಂಬೇಡ್ಕರ್ ಭವನದಲ್ಲಿ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.

ಡಿ.9 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಡಿ.10 ನಾಮಪತ್ರಗಳನ್ನು ಪರಿಶೀಲನೆ. ಡಿ. 12 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ.

ಇಂದು 8ನೇ ವಾರ್ಡ್ ಎಳ್ಳುಪುರ ಬಿಸಿಎಂ ಎ ಪಕ್ಷೇತರ ಅಭ್ಯರ್ಥಿಯಾಗಿ ರವಿಕುಮಾರ್ ಕೆ.ಎಂ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿ ಮಾಧ್ಯಮದವರೊಂದಿಗೆ ರವಿಕುಮಾರ್ ಕೆ.ಎಂ ಮಾತನಾಡಿ, ಕಾರ್ಮಿಕರು, ರೈತರು, ಮಹಿಳೆಯರು, ಯುವಕರ ಪರವಾಗಿ ಹಗಲಿರುಳು ಕೆಲಸ ಮಾಡುತ್ತೇವೆ. ಎಳ್ಳುಪುರ ವಾರ್ಡ್ ನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಹಾಗೂ ನಿಮ್ಮ ಸೇವೆ ಮಾಡಲು ನನಗೆ ಮತ ಚಲಾಯಿಸುವ ಮೂಲಕ ಅವಕಾಶ ಮಾಡಿಕೊಡಬೇಕು. ನಾನು ಯಾವದೇ ಪಕ್ಷದಡಿಯಲ್ಲಿ ಸ್ಪರ್ಧಿಸುತ್ತಿಲ್ಲ. ನಾನು ಜನದನಿ ವೇದಿಕೆಯಲ್ಲಿ ಇದ್ದುಕೊಂಡು ಹೋರಾಟಗಳನ್ನು ಮಾಡುತ್ತಾ, ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಸರ್ಕಾರಗಳ ಕಿವಿಹಿಂಡುವ ಕೆಲಸ ಮಾಡುತ್ತಿದ್ದೇನೆ ಎಂದರು.

ಇಷ್ಟು ದಿನ ಪ್ರಾದೇಶಿಕ ಹಾಗೂ ಕೇಂದ್ರ ರಾಜಕೀಯ ಪಕ್ಷಗಳ ರಾಜಕೀಯ ಮುಖಂಡರ ಬಳಿ ಎಳ್ಳುಪುರ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾನು ಈ ರಾಜಕೀಯ ಪಕ್ಷಗಳನ್ನು ನಂಬದೇ ಎಳ್ಳುಪುರವನ್ನು ಅಭಿವೃದ್ಧಿ ಪಡಿಸಲು ಪಕ್ಷೇತರನಾಗಿ ಸ್ಪರ್ಧಿಸಿದ್ದೇನೆ ಎಂದರು.

ಯಾವುದೇ ಪಕ್ಷಗಳ ಆಮಿಷಕ್ಕೆ ಬಲಿಯಾಗದೇ ಪಕ್ಷೇತರ ಅಭ್ಯರ್ಥಿಯಾದ ನನಗೆ ಮತಚಲಾಯಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಎಳ್ಳುಪುರ ಮತದಾರರಲ್ಲಿ ಮನವಿ ಮಾಡಿದರು.

ಎಳ್ಳುಪುರ ವಾರ್ಡ್ ಗೆ ಮೂಲಭೂತ ಸೌಕರ್ಯಗಳು, ಉದ್ಯೋಗ‌‌ ಕಲ್ಪಿಸುವುದು, ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಸದ್ವಿನಿಯೋಗ ಪಡಿಸಿಕೊಳ್ಳುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!