
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಯು ಚುನಾವಣೆಗೆ ಪೂರಕ ವ್ಯವಸ್ಥೆಯನ್ನು ಕಲ್ಪಿಸಿದ ಪರಿಣಾಮ ಚುನಾವಣೆ ಯಾವುದೇ ಸಮಸ್ಯೆಯಿಲ್ಲಿದೆ ಪೂರ್ಣಗೊಂಡಿದೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಗೆ ಇದೇ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಮತದಾನ ಪೂರ್ಣಗೊಂಡಿದೆ. ಚುನಾವಣೆಯಲ್ಲಿ ಮತದಾರರು ಅತ್ಯಂತ ಹೆಚ್ಚು ಉತ್ಸುಕರಾಗಿ ಭಾಗವಹಿಸಿದ್ದಾರೆ. ಪಟ್ಟಣ ಪಂಚಾಯಿತಿಯಲ್ಲಿ ಶೇ.78.45ರಷ್ಟು ಮತದಾನವಾಗಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿತ್ತು. ಬೆಳಿಗ್ಗೆ ನಿಧಾನವಾಗಿ ನಡೆದ ಮತದಾನ ನಂತರ ಮತದಾನ ಚುರುಕುಗೊಂಡಿದೆ. ಭಾನುವಾರ 12 ಗಂಟೆ ಬಳಿಕ ಮತದಾನ ವೇಗ ಪಡೆದುಕೊಂಡಿದ್ದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿದ್ದಾರೆ.
ನಕಲಿ ಮತದಾನಕ್ಕೆ ಯತ್ನ, ಪೊಲೀಸ್ ವಶಕ್ಕೆ
ಬಾಶೆಟ್ಟಿಹಳ್ಳಿ ಪಪಂ ವಾರ್ಡ್ ನಂ.17ರಲ್ಲಿ ವ್ಯಕ್ತಿಯೋರ್ವ ನಕಲಿ ಮತದಾನಕ್ಕೆ ಯತ್ನಿಸಿದ್ದಾನೆ. ಈ ವೇಳೆ ಬೂತ್ ಏಜೆಂಟರು ವ್ಯಕ್ತಿಯ ಗುರುತು ರುಜುಪಡಿಸಿದ ಕಾರಣ ವ್ಯಕ್ತಿಯನ್ನು ಮತದಾನ ಕೇಂದ್ರದಿಂದ ಹೊರ ಕಳುಹಿಸಿ, ಪೊಲೀಸ್ ವಶಕ್ಕೆ ನೀಡಲಾಯಿತು.
ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ
ಪಟ್ಟಣ ಪಂಚಾಯತಿ ಚುನಾವಣೆಯ ನಾಗದೇನಹಳ್ಳಿ ಮತಗಟ್ಟೆಯಲ್ಲಿ ನೇಮಿಸಿದ್ದ ಶಿಕ್ಷಕನೋರ್ವ ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ಮದ್ಯದ ಅಮಲಿನಲ್ಲಿ ಬಂದಿದ್ದ ಶಿಕ್ಷಕನನ್ನ ಪೊಲೀಸರ ವಶಕ್ಕೆ ಚುನಾವಣಾಧಿಕಾರಿಗಳು ನೀಡಿದ್ದಾರೆ.
ಭಾನುವಾರ ಬೆಳಗ್ಗೆ 7 ಗಂಟೆಯಿಂದಲೇ ಚುನಾವಣಾ ಮತದಾನ ಪ್ರಕ್ರಿಯೆಯಲ್ಲಿ ಕಾರ್ಯಪ್ರವೃತ್ತರಾಗಿದ್ದ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಎಲ್ಲಾ ಮತಗಟ್ಟೆಗಳಲ್ಲಿನ ವ್ಯವಸ್ಥೆಗಳನ್ನ ಪರಿಶೀಲನೆ ನಡೆಸಿದರು.
ಮತಗಟ್ಟೆ ಬಳಿ ಹಾಕಲಾಗಿದ್ದ ಶಾಮಿಯಾನ, ಪೆಂಡಾಲ್‌ಗಳನ್ನು ಕಡ್ಡಾಯವಾಗಿ ತೆರವುಗೊಳಿಸಿ ಚುನಾವಣೆಯ ನೀತಿ ಸಂಹಿತೆಗಳನ್ನ ಪಾಲಿಸುವಂತೆ ರಾಜಕೀಯ ಪಕ್ಷಗಳಿಗೆ ಸೂಚಿಸಿದರು. ಜತೆಗೆ ಪಪಂ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ನೀಡಿದ್ದಾರೆ. ಜತೆಗೆ ಎಸಿ ದುರ್ಗಾಶ್ರೀ, ತಹಶೀಲ್ದಾರ್ ಮಲ್ಲಪ್ಪ ಅವರು ಕೂಡ ವಿವಿಧ ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…
ಡಿ.24ಕ್ಕೆ ಮತ ಎಣಿಕೆ
ಭಾನುವಾರ ನಡೆದ ಬಾಶೆಟ್ಟಿಹಳ್ಳಿ ಚುನಾವಣೆಯ ಮತದಾನದ ಮತಗಳನ್ನು ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಮತಪೆಟ್ಟಿಗೆಗಳು ಭದ್ರವಾಗಿ ಇಡಲಾಗಿದ್ದು, ಭದ್ರತೆಗೆ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡಲಾಗಿದೆ. ಡಿ.24 ಬುಧವಾರದಂದು ಕೊಂಗಾಡಿಯಪ್ಪ ಕಾಲೇಜಿನಲ್ಲಿಯೇ ಮತ ಎಣಿಕೆ ನಡೆಯಲಿದೆ.