ಬಾಲ್ಯ ವಿವಾಹ ಕಂಡುಬಂದಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗೆ ದೂರು ನೀಡಿ

ಬಾಲ್ಯವಿವಾಹವು ಹಿಂದಿನ ಕಾಲದಿಂದಲೂ ನಡೆದು ಬಂದಿರುವ ಅನಿಷ್ಠ ಪದ್ಧತಿಯಾಗಿದ್ದು, ಈ ಶತಮಾನದಲ್ಲಿಯೂ ಮುಂದುವರೆಯುವುದು ಶೋಚನೀಯವಾಗಿರುತ್ತದೆ.

ಬಾಲ್ಯವಿವಾಹವೆಂದರೆ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದ ಒಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯವಿವಾಹವೆಂದು ಪರಿಗಣಿಸಲಾಗುತ್ತದೆ.

ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಹಾಗೂ ಉತ್ತಮ ಸಮಾಜದ ನಿರ್ಮಾಣಕ್ಕೆ ಧಕ್ಕೆಉಂಟು ಮಾಡುತ್ತದೆ.‌ ಈ ಅಪಾಯಕಾರಿ ಪದ್ಧತಿಯು ತಾಯಂದಿರ ಮರಣ, ಶಿಶು ಮರಣ, ಅಪೌಷ್ಠಕತೆಯನ್ನು ಉಂಟುಮಾಡುವುದಲ್ಲದೇ ಮ್ಕಕಳ ಬೌದ್ಧಿಕ, ದೈಹಿಕ ಹಾಗೂ ಮಾನಸಿಕ ಪರಿಣಾಮಗಳನ್ನು ಉಂಟುಮಾಡುತ್ತದೆ.

ಈ ಎಲ್ಲಾ ಕಾರಣಗಳಿಂದಾಗಿ ಬಾಲ್ಯವಿವಾಹವೆಂಬ ಅನಿಷ್ಠ ಪದ್ಧತಿ ಹಾಗೂ ಸಾಮಾಜಿಕ ಪಿಡುಗು ಎಂದು ಗುರುತಿಸಿ, ಇದನ್ನು ನಿಷೇಧಿಸಲುಕೇಂದ್ರ ಸರ್ಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಜಾರಿಗೆತರುತ್ತದೆ. ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ರಾಜ್ಯ, ಜಿಲ್ಲಾ, ತಾಲ್ಲೂಕು, ಗ್ರಾಮ ಪಂಚಾಯಿತಿ, ಗ್ರಾಮ ಮಟ್ಟದಲ್ಲಿ ಬಾಲ್ಯವಿವಾಹ ನಿಷೇಧಾಧಿಕಾರಿಗಳನ್ನು ನೇಮಿಸಲಾಗಿರುತ್ತದೆ.

ಅದೇರೀತಿ, ಈ ಕಾರ್ಯವು ಕೇವಲ ಸರ್ಕಾರಿ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿರದೇ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿರುತ್ತದೆ.

ಬಾಲ್ಯವಿವಾಹ ನಿಷೇಧ (ಕರ್ನಾಟಕತಿದ್ದುಪಡಿ) ಅಧಿನಿಯಮ-2016ರ ಪ್ರಕಾರ ಒಂದು ವೇಳೆ ಬಾಲ್ಯವಿವಾಹ ನಡೆದಲ್ಲಿ 18 ವರ್ಷದೊಳಗಿನ ಹೆಣ್ಣು ಮಗುವನ್ನು ಮದುವೆಯಾದ ವಯಸ್ಕ ವ್ಯಕ್ತಿ, ಮದುವೆ ಮಾಡುವ ಪಾಲಕರು, ಪೋಷಕರು, ಇಂತಹ ಮದುವೆಯಲ್ಲಿ ಭಾಗವಹಿಸುವವರು, ಬಾಲ್ಯ ವಿವಾಹವನ್ನು ಏರ್ಪಡಿಸುವ, ನಿರ್ದೇಶಿಸುವ, ನೆರೆವೇರಿಸುವ ಮತ್ತು ಮದುವೆಗೆ ಕುಮ್ಮಕ್ಕು ನೀಡುವ ಸಂಸ್ಥೆ,‌ ವ್ಯಕ್ತಿ, ಕಾಯ್ದೆಯಡಿ ನೀಡಿದ ತಡೆಯಾಜ್ಞೆಯನ್ನು ಉಲ್ಲಂಘಿಸಿದವರು, ಮಗುವಿನ ಜವಾಬ್ದಾರಿಯನ್ನು ಹೊತ್ತ ಯಾವುದೇ ವ್ಯಕ್ತಿ, ಸಂಸ್ಥೆಯ ನಿರ್ಲಕ್ಷತೆಯಿಂದ ಬಾಲ್ಯವಿವಾಹವನ್ನು ತಡೆಯಲು ವಿಫಲರಾದವರು ಸಹ ತಪ್ಪಿತಸ್ಥರು.

ಇವರುಗಳಿಗೆ ಕಾಯ್ದೆ ಪ್ರಕಾರ “ಒಂದು ವರ್ಷಕ್ಕೆ ಕಡಿಮೆಯಿಲ್ಲದ ಅಂದರೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ” ಅಥವಾ “ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಗೆ ಅಥವಾ ಇವೆರಡರಿಂದಲೂ ಶಿಕ್ಷೆಗೆ ಗುರಿಯಾಗತಕ್ಕದ್ದು”, ಈ ಕಾಯ್ದೆಯಡಿ ಪ್ರತಿಯೊಬ್ಬ ಪೊಲೀಸ್‌ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಪ್ರೇರಿತವಾಗಿ ದೂರು ದಾಖಲು ಮಾಡುವ ಅವಕಾಶವಿರುತ್ತದೆ.

ಮೇ 10(ಶುಕ್ರವಾರ) ರಂದು ಅಕ್ಷಯ ತೃತೀಯ ದಿನವಾಗಿದ್ದು, ಬಾಲ್ಯವಿವಾಹ ಪ್ರಕರಣಗಳು ಹೆಚ್ಚು ನಡೆಯುವ ಸಾಧ್ಯತೆಯಿರುವುದರಿಂದ ಎಲ್ಲಾ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ, ಬಾಲ್ಯವಿವಾಹ ತಡೆಗಟ್ಟುವ ಬಗ್ಗೆ ಕಟ್ಟುನಿಟ್ಟಿನ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಆದ್ದರಿಂದ ಬಾಲ್ಯವಿವಾಹ ನಿಷೇಧಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಡಿ ಸಾಮೂಹಿಕ ವಿವಾಹಗಳಾಗಲಿ ಅಥವಾ ವೈಯಕ್ತಿಕ ವಿವಾಹಗಳಾಗಲಿ ಯಾವುದೇ ಬಾಲ್ಯ ವಿವಾಹಗಳು ಜರುಗದಂತೆ ಕ್ರಮವಹಿಸಬೇಕು ಹಾಗೂ ಮುಂದುವರೆದಂತೆ ಸಾಮೂಹಿಕ ವಿವಾಹಗಳ ಕಲ್ಯಾಣ ಮಂಟಪಗಳಲ್ಲಿ ಅಥವಾ ಇನ್ನಿತರ ಧಾರ್ಮಿಕ ಸ್ಥಳಗಳಲ್ಲಿ ಬಾಲ್ಯವಿವಾಹಗಳು ನಡೆಯದಂತೆ ಕ್ರಮವಹಿಸಬೇಕು.

ಸಾರ್ವಜನಿಕರು ಜಿಲ್ಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತುರ್ತಾಗಿ ಮಕ್ಕಳ ಸಹಾಯವಾಣಿ-1098, ಪೊಲೀಸ್ ಸಹಾಯವಾಣಿ 112 ಮತ್ತು ಮಕ್ಕಳ ರಕ್ಷಣಾ ಘಟಕ 080-29560034 ಹಾಗೂ ಸಂಬಂಧಪಟ್ಟ ಪೊಲೀಸ್‌ ಠಾಣೆ ಅವರ ಗಮನಕ್ಕೆ ತುರ್ತಾಗಿ ತರಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *